ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರ 10 ಕಿಮೀ ದಾರಿಗೆ 29 ನಿಮಿಷ ಪ್ರಯಾಣ

ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರ 10 ಕಿಮೀ ದಾರಿಗೆ 29 ನಿಮಿಷ ಪ್ರಯಾಣ

ಬೆಂಗಳೂರು, ಫೆಬ್ರವರಿ. 16: ಸಿಲಿಕಾನ್ ಸಿಟಿಯ ಜನದಟ್ಟಣೆ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ರಾಜ್ಯ ಬಿಟ್ಟು ಹೊರ ರಾಜ್ಯದ ಸಾವಿರಾರು ಮಂದಿ ಬೆಂಗಳೂರಿನಲ್ಲಿ ಆಶ್ರಯ ಪಡೆದಿದ್ದಾರೆ. ಅದರಿಂದ ಜನದಟ್ಟಣೆ, ಸಂಚಾರ ದಟ್ಟಣೆಯಲ್ಲಿ ಭಾರೀ ಏರಿಕೆಯಾಗಿದೆ. ಈ ಬಗ್ಗೆ ವರದಿ ಬಹಿರಂಗವಾಗಿದ್ದು, ನಮ್ಮ ಹುಬ್ಬೇರಿಸುವಂತಿದೆ.

ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್‌ಟಾಮ್ ಪ್ರಕಟಿಸಿದ ಟ್ರಾಫಿಕ್ ಸೂಚ್ಯಂಕದ ಪ್ರಕಾರ, ನಗರ ಕೇಂದ್ರ (ಬಿಬಿಎಂಪಿ ಪ್ರದೇಶ) ವಿಭಾಗದಲ್ಲಿ 2022 ರಲ್ಲಿ ಬೆಂಗಳೂರು ವಿಶ್ವದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿದೆ.

2022 ರಲ್ಲಿ ನಗರ ಪ್ರದೇಶದಲ್ಲಿ 10 ಕಿಮೀ ಕ್ರಮಿಸಲು ಬೆಂಗಳೂರಿಗರು 29 ನಿಮಿಷಗಳು ಮತ್ತು 10 ಸೆಕೆಂಡುಗಳನ್ನು ತೆಗೆದುಕೊಂಡಿರುವುದು ವರದಿಯಾಗಿದೆ. 2021 ರಲ್ಲಿ ಗಂಟೆಗೆ 14 ಕಿ.ಮಿ ಆಗಿದ್ದರೇ, 2022 ರಲ್ಲಿನಗರ ಕೇಂದ್ರದಲ್ಲಿ ಪೀಕ್‌ ಅವರ್ಸ್‌ಗಳಲ್ಲಿ ಸರಾಸರಿ ವೇಗವು ಗಂಟೆಗೆ 18 ಕಿಮೀ ಆಗಿತ್ತು.

10 ಕಿ.ಮೀ ಕ್ರಮಿಸಲು ಪ್ರಯಾಣಿಕರು 36 ನಿಮಿಷ ಮತ್ತು 20 ಸೆಕೆಂಡುಗಳನ್ನು ತೆಗೆದುಕೊಂಡಿರುವ ಲಂಡನ್ ಅತಿ ಹೆಚ್ಚು ದಟ್ಟಣೆಯ ನಗರ ಕೇಂದ್ರವಾಗಿದೆ ಎಂದು ವರದಿ ಹೇಳಿದೆ. ಅದರ ನಂತರದ ಸ್ಥಾನದಲ್ಲಿ ಬೆಂಗಳೂರು ಸೇರಿಕೊಂಡಿದೆ.

ಭಾರತದಲ್ಲಿ ಪುಣೆ ಆರನೇ ಸ್ಥಾನದಲ್ಲಿದ್ದರೇ, ನವದೆಹಲಿ 34ನೇ ಸ್ಥಾನ ಮತ್ತು ಮುಂಬೈ 47ನೇ ಸ್ಥಾನದಲ್ಲಿದೆ.

ಮೆಟ್ರೋ ಪ್ರದೇಶದ ವಿಭಾಗದಲ್ಲಿ, ಬೊಗೋಟಾ ಅತ್ಯಂತ ಜನದಟ್ಟಣೆಯ ಪ್ರದೇಶವಾಗಿದ್ದು, ನಂತರ ಮನಿಲಾ, ಸಪೊರೊ, ಲಿಮಾ, ಬೆಂಗಳೂರು (ಐದನೇ), ಮುಂಬೈ (ಆರನೇ), ನಗೋಯಾ, ಪುಣೆ, ಟೋಕಿಯೊ ಮತ್ತು ಬುಕಾರೆಸ್ಟ್ ಸೇರಿವೆ.

ಮೆಟ್ರೋಪಾಲಿಟನ್ ಪ್ರದೇಶದಲ್ಲಿ, ಬೆಂಗಳೂರಿಗರು 10 ಕಿಮೀ ಕ್ರಮಿಸಲು 23 ನಿಮಿಷ 40 ಸೆಕೆಂಡುಗಳನ್ನು ತೆಗೆದುಕೊಂಡಿದ್ದಾರೆ. ಸರಾಸರಿ ವೇಗ ಗಂಟೆಗೆ 22 ಕಿ.ಮೀ. ಆಗಿದೆ.

ಬೆಂಗಳೂರು 2021 ರಲ್ಲಿ 10 ನೇ ಅತಿ ಹೆಚ್ಚು ದಟ್ಟಣೆಯ ನಗರವಾಗಿತ್ತು. 2020 ರಲ್ಲಿ ಆರನೇ ಸ್ಥಾನದಲ್ಲಿತ್ತು. 2022 ರಲ್ಲಿ ಬೆಂಗಳೂರಿನ ನಗರ ಕೇಂದ್ರದಲ್ಲಿ ಅತಿಹೆಚ್ಚು ಟ್ರಾಫೀಕ್ ಉಂಟಾಗಿರುವುದು ಅಕ್ಟೋಬರ್ 15 ರ ಶನಿವಾರ ಎಂದು ವರದಿ ಹೇಳಿದೆ. ಆ ದಿನ 10 ಕಿಮೀ ಕ್ರಮಿಸಲು 33 ನಿಮಿಷ 50 ಸೆಕೆಂಡುಗಳು ತೆಗೆದುಕೊಳ್ಳಲಾಗಿದೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಸರಾಸರಿ ಪ್ರಯಾಣದ ಸಮಯ ಹೆಚ್ಚಾಗಿದೆ. ಬೆಂಗಳೂರಿಗರು 10 ದಿನಗಳ್ಲಿ 260 ಗಂಟೆಗಳನ್ನು ಡ್ರೈವಿಂಗ್‌ನಲ್ಲಿ ಮತ್ತು 134 ಗಂಟೆಗಳನ್ನು ಟ್ರಾಫಿಕ್‌ನಿಂದ ಕಳೆದುಕೊಳ್ಳುತ್ತಿದ್ದಾರೆ.

ಬೆಳಗಿನ ಪೀಕ್ ಅವರ್ಸ್‌ಗಳಲ್ಲಿ ಬೆಂಗಳೂರಿಗರು ಪ್ರತಿ 10 ಕಿಮೀ ಪ್ರಯಾಣಕ್ಕೆ 15 ನಿಮಿಷಗಳಿಗಿಂತ ಹೆಚ್ಚು ಸಮಯ ಮತ್ತು ಸಂಜೆಯ ಸಮಯದಲ್ಲಿ ಪ್ರತಿ 10 ಕಿಮೀ ಪ್ರಯಾಣಕ್ಕೆ 20 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ.