ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ ಇಡಿ ಬೀದಿ ದೀಪ ಅಳವಡಿಕೆ - ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ ಇಡಿ ಬೀದಿ ದೀಪ ಅಳವಡಿಕೆ - ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅದರ ಪ್ರಯೋಜನ ಜನಸಾಮಾನ್ಯರಿಗೆ ತಲುಪಬೇಕು. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ ಇಡಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು

ಇಂದು ಬಿಬಿಎಂಪಿ ವತಿಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ ಇಡಿ ಬೀದಿ ದೀಪಗಳ ನಿಯಂತ್ರಣ ಕೊಠಡಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ‌ ಮಾತನಾಡಿ, ವಿ ಸೋಮಣ್ಣ ಅಂದರೆ, ವಿಕ್ಟರಿ ಸೋಮಣ್ಣ, ನಿಮ್ಮ ಮನಸು ಗೆದ್ದು ಚುನಾವಣೆ ಗೆಲ್ಲುವುದೇ ಸೋಮಣ್ಣ ಅವರ ಕೆಲಸ. ಅವರು ಹಿಡಿದ‌ ಕೆಲಸ ಮುಗಿಸುವವರೆಗೂ ಬಿಡುವುದಿಲ್ಲ. ಸೋಮಣ್ಣ ಇರುವವರೆಗೆ ನಿಮಗೆ ವಿಕ್ಟರಿ ಇದೆ. ನಮ್ಮ ಮಾಲಿಕರು ಮತದಾರರು, ನೀವು ಜಾಣತನದಿಂದ ಚುನಾವಣೆಯಲ್ಲಿ ಒಂದು ಬಟನ್ ಒತ್ತಿ ಸೋಮಣ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ ಎಂದು ಹೇಳಿದರು.

ಇವತ್ತು ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅದನ್ನು ಸದುಪಯೋಗ ಪಡೆಸಿಕೊಳ್ಳದೇ ಇದ್ದರೆ ಪ್ರಯೊಜನವಿಲ್ಲ. ಇಂಟರ್ನೆಟ್, ಸೈಟಲೈಟ್ ತಂತ್ರಜ್ಞಾನ ವನ್ನು ತಂದು 20 ಸಾವಿರ ಲೈಟ್ ಗಳನ್ನು ಇಲ್ಲಿಯೇ ಕುಳಿತು ನಿಯಂತ್ರಣ ಮಾಡುವ ವ್ಯವಸ್ಥೆ ತಂದಿದ್ದಾರೆ. ಯಾವುದೇ ಭಾಗದಲ್ಲಿ ಲೈಟ್ ಹಾನಿಗೊಳಗಾದರೆ ಅದನ್ನು 24 ಗಂಟೆಯಲ್ಲಿ ಬದಲಾಯಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಅನುದಾನ ಬಳಕೆ ಮಾಡುವ ಕಲೆ ಬಗ್ಗೆ ಸೋಮಣ್ಣ ಅವರಿಂದ ಕಲಿಯಬೇಕು. ಈ ಮಾದರಿಯನ್ನು ಅಳವಡಿಸಿಕೊಳ್ಳಲು ಶಾಸಕರಿಗೆ ಹೇಳಿದ್ದೇನೆ. ಅಲ್ಲದೇ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಭಾಗಗಗಳಿಗೆ ಎಲ್ ಇಡಿ ಲೈಟ್ ವ್ಯವಸ್ಥೆ ಮಾಡಲಾಗುವುದು. ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನೀವೆಲ್ಲ ಅದೃಷ್ಟವಂತರು ಸೋಮಣ್ಣ ಅವರದ್ದು 40 ವರ್ಷದ ಅನುಭವ. ಅವರು ನಿಮ್ಮ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 24×7 ಸೋಮಣ್ಣ ಅಂತ ಹೆಸರು ಇಡಬೇಕು. ಅವರು ದಿನದ 24 ಗಂಟೆ ಕೆಲಸ ಮಾಡುತ್ತಾರೆ. ಈ ಕೆಲಸ ಮಾಡಿದ‌ ಬಿಬಿಎಂಪಿಯವರಿಗೆ ಅಭಿನಂದನೆ ಸಲ್ಲಿಸಿ, ಕೇವಲ ನಿಮ್ಮ ಮನೆಗಳಿಗೆ ಅಲ್ಲ. ಎಲ್ಲ ಬೀದಿಗಳಿಗೆ ಬೆಳಕು ಬರಲಿ ಎಂದು ಆಶಿಸಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಸತಿ ಸಚಿವರಾದ ವಿ. ಸೋಮಣ್ಣ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಇತರರು ಹಾಜರಿದ್ದರು.