ಬಿ. ಶ್ರೀರಾಮುಲುಗೆ ಎದುರಾಳಿ ಅಭ್ಯರ್ಥಿ, ಡಿಕೆಶಿ ಮಹತ್ವದ ಘೋಷಣೆ!

ಬಿ. ಶ್ರೀರಾಮುಲುಗೆ ಎದುರಾಳಿ ಅಭ್ಯರ್ಥಿ, ಡಿಕೆಶಿ ಮಹತ್ವದ ಘೋಷಣೆ!

ಚಿತ್ರದುರ್ಗ, ಅಕ್ಟೋಬರ್ 14; ಮುಂದಿನ ಚುನಾವಣೆಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲುಗೆ ಎದುರಾಳಿಯಾಗಿ

ಅಭ್ಯರ್ಥಿ ಯಾರು?.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಲುಪಿದೆ. ಗುರುವಾರ ಸಂಜೆ ಇಲ್ಲಿ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿತ್ತು. ಶುಕ್ರವಾರ ಮೊಳಕಾಲ್ಮೂರಿನಿಂದ ಯಾತ್ರೆ ಆರಂಭಗೊಂಡಿದ್ದು, ಆಂಧ್ರ ಪ್ರದೇಶಕ್ಕೆ ಸಾಗಿ ಶನಿವಾರ ಬಳ್ಳಾರಿ ಮೂಲಕ ಮತ್ತೆ ಯಾತ್ರೆ ಕರ್ನಾಟಕಕ್ಕೆ ಬರಲಿದೆ.

ಮುಂದಿನ ಚುನಾವಣೆಗೆ ಮೊಳಕಾಲ್ಮೂರು ಮೀಸಲು ಕ್ಷೇತ್ರದ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಡಿ. ಕೆ. ಶಿವಕುಮಾರ್ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಟಿಕೆಟ್ ಕುರಿತು ಘೋಷಣೆಯೊಂದನ್ನು ಮಾಡಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಈಗಲೇ ಚುನಾವಣೆ ಕಾವು ಹೆಚ್ಚಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮೊಳಕಾಲ್ಮೂರು ಕ್ಷೇತ್ರದ ಹಾಲಿ ಶಾಸಕ ಬಿ. ಶ್ರೀರಾಮುಲು ಮುಂದಿನ ಚುನಾವಣೆ ವೇಳೆಗೆ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ಅವರು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಕುರಿತು ಅವರು ಯಾವುದೇ ಹೇಳಿಕೆ ನೀಡಿಲ್ಲ.ಮೊಳಕಾಲ್ಮೂರು ಟಿಕೆಟ್‌ಗಾಗಿ ಪೈಪೋಟಿ

ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ, ಡಾ ಯೋಗೇಶ್ ಬಾಬು ಆಕಾಂಕ್ಷಿಗಳು. ಇದು ಕಾಂಗ್ರೆಸ್ ನಾಯಕರ ತಲೆ ನೋವಿಗೆ ಕಾರಣವಾಗಿದೆ. ಆದ್ದರಿಂದಲೇ ಡಿ. ಕೆ. ಶಿವಕುಮಾರ್ ಗುರುವಾರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ್ದಾರೆ.

ರಾಹುಲ್ ಗಾಂಧಿ ಸಮ್ಮುಖದಲ್ಲಿ ಡಿ. ಕೆ. ಶಿವಕುಮಾರ್, " ತಿಪ್ಪೇಸ್ವಾಮಿ ಮತ್ತು ಡಾ. ಯೋಗೇಶ್ ಬಾಬು ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದಾರೆ. ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಒಟ್ಟಾಗಿ ಕೆಲಸ ಮಾಡುತ್ತಾರೆ" ಎಂದು ಘೋಷಿಸಿದರು

ತಿಪ್ಪೇಸ್ವಾಮಿಗೆ ಟಿಕೆಟ್ ಮಿಸ್ ಆಗಿತ್ತು

2013ರ ಚುನಾವಣೆಯಲ್ಲಿ ಬಿಎಸ್‌ಆರ್‌ ಪಕ್ಷದಿಂದ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಸ್. ತಿಪ್ಪೇಸ್ವಾಮಿ 76,827 ಮತಗಳನ್ನು ಪಡೆದು ಜಯಗಳಿಸಿದ್ದರು. ಪಕ್ಷ ಬಿಜೆಪಿ ಜೊತೆ ವಿಲೀನಗೊಂಡ ಬಳಿಕ 2018ರಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಎಂದು ನಿರೀಕ್ಷೆ ಮಾಡಲಾಗಿತ್ತು.

ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದಲೂ ಅಭ್ಯರ್ಥಿಯಾದರು. ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ 84,018 ಮತಗಳನ್ನು ಪಡೆದು ಗೆಲುವು ಕಂಡರು.

ಕಾಂಗ್ರೆಸ್ ಸೇರಿದ್ದ ತಿಪ್ಪೇಸ್ವಾಮಿ

2018ರಲ್ಲಿ ಬಿ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಅಭ್ಯರ್ಥಿಯಾದ ಬಳಿಕ ಬಂಡಾಯ ಎದ್ದ ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಚುನಾವಣೆಯಲ್ಲಿ 41,152 ಮತಗಳನ್ನು ಪಡೆದರು.

2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಅವರು ಕಾಂಗ್ರೆಸ್ ಸೇರಿದರು. ಈ ಬಾರಿ ಕಾಂಗ್ರೆಸ್‌ನಿಂದ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಡಾ. ಯೋಗೇಶ್ ಬಾಬು

2018ರ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಡಾ. ಯೋಗೇಶ್ ಬಾಬು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 41,973 ಮತಗಳನ್ನು ಪಡೆದು ಬಿ. ಶ್ರೀರಾಮುಲು ಮುಂದೆ ಸೋಲು ಕಂಡಿದ್ದರು. ಮುಂದಿನ ಚುನಾವಣೆಯಲ್ಲಿ ಅವರು ಟಿಕೆಟ್ ಆಕಾಂಕ್ಷಿ.

ಕಳೆದ ಚುನಾವಣೆಯಲ್ಲಿ ಪಕ್ಷೇತರನಾಗಿ ನಿಂತು 41,152 ಮತಗಳನ್ನು ಪಡೆದಿದ್ದ ತಿಪ್ಪೇಸ್ವಾಮಿ, ಬಳಿಕ ಕಾಂಗ್ರೆಸ್ ಸೇರಿದ್ದರು. ಅವರು ಸಹ ಈಗ ಮುಂದಿನ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಆದ್ದರಿಂದ ಕ್ಷೇತ್ರದ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದೆ.