ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ಗೆ ವೆಂಗಸರ್ಕಾರ, ಶುಭಾಂಗಿ

ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ಗೆ ವೆಂಗಸರ್ಕಾರ, ಶುಭಾಂಗಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಲೀಪ್ ವೆಂಗಸರ್ಕಾರ್ ಹಾಗೂ ಶುಭಾಂಗಿ ಕುಲಕರ್ಣಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್‌ ಕೌನ್ಸಿಲ್ ಸಮಿತಿಗೆ ಭಾರತ ಕ್ರಿಕೆಟಿಗರ ಸಂಸ್ಥೆಯ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಶನಿವಾರ ನಡೆದ ಚುನಾವಣೆಯಲ್ಲಿ ದಿಲೀಪ್ ಅವರು ಐಸಿಎ ನಿರ್ಗಮಿತ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ವಿರುದ್ಧ ಜಯಿಸಿದರು. ಮೂರು ದಿನಗಳ ಕಾಲ ನಡೆದ ಇ ವೋಟಿಂಗ್‌ನಲ್ಲಿ ವೆಂಗಸರ್ಕಾರ್ 402 ಹಾಗೂ ಮಲ್ಹೋತ್ರಾ 230 ಮತಗಳನ್ನು ಗಳಿಸಿದ್ದಾರೆ. ಶುಭಾಂಗಿ ಕುಲಕರ್ಣಿಯವರು ಮಹಿಳಾ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಇವರು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಗಳಲ್ಲಿ ಐಸಿಎಯನ್ನು ಪ್ರತಿನಿಧಿಸುವರು.

2019ರಲ್ಲಿ ಆರಂಭವಾದ ಐಸಿಎ ಸಮಿತಿಯಲ್ಲಿದ್ದ ಅನ್ಷುಮನ್ ಗಾಯಕವಾಡ್ ಹಾಗೂ ಕರ್ನಾಟಕದ ಶಾಂತಾ ರಂಗಸ್ವಾಮಿ ಅವರು ಕ್ರಮವಾಗಿ ಅಧ್ಯಕ್ಷ ಹಾಗೂ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಅನ್ಷುಮನ್ ಗಾಯಕವಾಡ (ಅಧ್ಯಕ್ಷ, ನಿರ್ದೇಶಕ), ಹಿತೇಶ್ ಮಜುಂದಾರ್ (ಕಾರ್ಯದರ್ಶಿ-ನಿರ್ದೇಶಕ), ವಿ. ಕೃಷ್ಣಸ್ವಾಮಿ (ಖಜಾಂಚಿ-ನಿರ್ದೇಶಕ), ಶಾಂತಾ ರಂಗಸ್ವಾಮಿ (ಸದಸ್ಯ ಪ್ರತಿನಿಧಿ-ನಿರ್ದೇಶಕಿ), ಯಜುವೀಂದ್ರ ಸಿಂಗ್ ಬಿಲ್ಕಾ (ಸದಸ್ಯ ಪ್ರತಿನಿಧಿ-ನಿರ್ದೇಶಕರು), ದಿಲೀಪ್ ವೆಂಗಸರ್ಕಾರ (ಬಿಸಿಸಿಯ ಅಪೆಕ್ಸ್‌ ಕೌನ್ಸಿಲ್‌ಗೆ ಐಸಿಎ ಪ್ರತಿನಿಧಿ), ಶುಭಾಂಗಿ ಡಿ ಕುಲಕರ್ಣಿ (ಬಿಸಿಸಿಯ ಅಪೆಕ್ಸ್‌ ಕೌನ್ಸಿಲ್‌ಗೆ ಐಸಿಎ ಮಹಿಳಾ ಪ್ರತಿನಿಧಿ), ಪ್ರಗ್ಯಾನ್ ಓಜಾ (ಐಪಿಎಲ್ ಆಡಳಿತ ಸಮಿತಿಗೆ ಐಸಿಎ ಪ್ರತಿನಿಧಿ).