ಬಾಂಗ್ಲಾದೇಶದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್: 50ನೇ ವಿಜಯ ದಿವಸ್‌ನಲ್ಲಿ ಭಾಗಿ
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಬೆಳಿಗ್ಗೆ ದೆಹಲಿಯಿಂದ ಢಾಕಾಗೆ ಪ್ರಯಾಣಿಸಿದರು. ಅಲ್ಲಿ 50ನೇ ವರ್ಷದ ಬಾಂಗ್ಲಾ ವಿಮೋಚನಾ ದಿನಾಚರಣೆಯಲ್ಲಿ (ವಿಜಯ ದಿವಸ್) ಭಾಗಿಯಾಗಲಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ರಾಮನಾಥ ಕೋವಿಂದ್ ಅವರು ವಿದೇಶ ಪ್ರಯಾಣ ಕೈಗೊಂಡಿದ್ದಾರೆ.
1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಬಾಂಗ್ಲಾದೇಶಕ್ಕೆ ವಿಮೋಚನೆ ದೊರೆಯಿತು. ಆ ವಿಜಯೋತ್ಸವದ ಅಂಗವಾಗಿ ಭಾರತ ಸಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ರಾಷ್ಟ್ರಪತಿಗಳ ಬಾಂಗ್ಲಾ ಭೇಟಿಯ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹರ್ಷ್‌ವರ್ಧನ್ ಶ್ರಿಂಗ್ಲಾ, ಈ ಸಂದರ್ಭವು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವುದಾಗಿ ತಿಳಿಸಿದ್ದಾರೆ.
President Ram Nath Kovind emplanes for Dhaka to participate in the special celebrations of Mujib Shato Borsho and the 50th anniversary of Bangladesh’s Liberation. This is the first state visit of the President since the outbreak of COVID-19 pandemic. pic.twitter.com/0TvQs3IPz6
— President of India (@rashtrapatibhvn) December 15, 2021
1971ರ ಡಿಸೆಂಬರ್ 16ರಂದು ಸುಮಾರು 93,000 ಪಡೆಯ ಪಾಕಿಸ್ತಾನ ಸೇನೆಯು ಭಾರತ-ಬಾಂಗ್ಲಾ ಸೇನೆಯ ಮುಂದೆ ಸಂಪೂರ್ಣ ಶರಣಾಗಿತ್ತು. ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ರಾಯಭಾರ ಸಂಬಂಧ ವೃದ್ಧಿಗೂ ಆ ಯುದ್ಧ ಕಾರಣವಾಯಿತು. ಭಾರತದ 1,660 ಸೈನಿಕರು ಬಾಂಗ್ಲಾ ಸ್ವಾತಂತ್ರ್ಯದ ಹೋರಾಟದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದರು.
ಇಂದು ರಾಷ್ಟ್ರಪತಿ ಕೋವಿಂದ್ ಅವರು ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಬಾಂಗ್ಲಾದೇಶದ ವಿಮೋಚನೆಗೆ ಹೋರಾಡಿ ಮಡಿದವರಿಗೆ ನಮನ ಸಲ್ಲಿಸಲಿದ್ದಾರೆ. ಹಾಗೇ ವಂಗಬಂಧು ಸ್ಮಾರಕ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಲಿದ್ದಾರೆ.
ಈವರೆಗೂ ಬಾಂಗ್ಲಾದೇಶಕ್ಕೆ ಭಾರತವು 33 ಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ಉಡುಗೊರೆಯಾಗಿ ರವಾನಿಸಿದೆ. ಕೊವ್ಯಾಕ್ಸ್ ವ್ಯವಸ್ಥೆಯ ಮೂಲಕ 35 ಲಕ್ಷ ಹಾಗೂ ವಾಣಿಜ್ಯ ವಹಿವಾಟಿನ ಮೂಲಕ 1.5 ಕೋಟಿ ಡೋಸ್ ಲಸಿಕೆ ರಫ್ತು ಮಾಡಲಾಗಿದೆ.
ರಾಷ್ಟ್ರಪತಿ ಭಾಗಿಯಾಗಲಿರುವ ಇತರೆ ಕಾರ್ಯಕ್ರಮಗಳು:
* ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಮತ್ತು ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಸಭೆ.
* ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವರು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ.
* ರಾಮನಾಥ ಕೋವಿಂದ್ ಅವರ ಭೇಟಿಯ ಪ್ರಯುಕ್ತ ಬಾಂಗ್ಲಾದೇಶದ ಅಧ್ಯಕ್ಷರಿಂದ ಇಂದು ಔತಣ ಕೂಟ.
* ಭಾರತೀಯ ಶಸ್ತ್ರಾಸ್ತ್ರ ಪಡೆಗಳ 122 ಸದಸ್ಯರ ತಂಡವು ವಿಜಯದಿವಸದ ಪರೇಡ್ ನಡೆಸಲಿದ್ದು, ಕೋವಿಂದ್ ಅವರು ಭಾಗಿಯಾಗಲಿದ್ದಾರೆ.
* ಬಾಂಗ್ಲಾದೇಶದ 'ಮುಕ್ತಿ ಜೋಧಾಗಳು' ಮತ್ತು ಭಾರತದ ಹೋರಾಟಗಾರರೊಂದಿಗೆ ಮಾತುಕತೆ.