ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚೆನ್ನೈಗೆ ಅಪ್ಪಳಿಸಿದ ಚಂಡಮಾರುತ, ಭಾರಿ ಮಳೆ
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತವು ತಮಿಳುನಾಡಿನ ಕರಾವಳಿ ಭಾಗದಲ್ಲಿ ಗುರುವಾರ ಬೆಳಿಗ್ಗೆ ಭೂಪ್ರದೇಶಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಚೆನ್ನೈನಿಂದ 140 ಕಿಲೋ ಮೀಟರ್ ದೂರದಲ್ಲಿ ಈ ಚಂಡಮಾರುತ ಅಪ್ಪಳಿಸಿದೆ. ಪ್ರತಿ ಗಂಟೆಗೆ ಸುಮಾರು 160ರಿಂದ 170 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಚಂಡಮಾರುತ ಸಂಜೆ ವೇಳೆಗೆ ಆಂಧ್ರ ಪ್ರದೇಶದ ಕರಾವಳಿಯನ್ನು ಹಾದುಹೋಗಲಿದೆ. ಈ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ತಿರುವಳ್ಳೂರ್, ಕಾಂಚೀಪುರಂ ಚೆಂಗಲ್ಪಟ್ಟು, ಕೊಡಂಬಕ್ಕಂ ಮತ್ತು ಅಶೋಕ್ ನಗರ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈವರೆಗೆ 12 ಮಂದಿ ಮೃತಪಟ್ಟಿದ್ದಾರೆ. ನಗರಗಳ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮಳೆ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 11 ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್ಡಿಆರ್ಎಫ್) 7 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
'ವಾಯುಭಾರ ಕುಸಿತದಿಂದ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿದೆ. ಎರಡು ದಿನಗಳ ನಂತರ ಇದರ ಪ್ರಬಲತೆ ತಗ್ಗಿ, ಮಳೆ ಕಡಿಮೆಯಾಗಲಿದೆ' ಎಂದು ಹವಾಮಾನ ತಜ್ಞ ಸದಾನಂದ ಅಡಿಗ ವಿವರಿಸಿದ್ದಾರೆ.