ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದಲೇ ಆಂಟಿಯ ಬರ್ಬರ ಹತ್ಯೆ! ಶವಪರೀಕ್ಷೆಯಲ್ಲಿ ರಹಸ್ಯ ಬಯಲು

ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದಲೇ ಆಂಟಿಯ ಬರ್ಬರ ಹತ್ಯೆ! ಶವಪರೀಕ್ಷೆಯಲ್ಲಿ ರಹಸ್ಯ ಬಯಲು

ಕೊಚ್ಚಿ: ವಿವಾಹಿತೆ ಮಹಿಳೆಯೊಬ್ಬಳು ಫೇಸ್​ಬುಕ್​ ಫ್ರೆಂಡ್​ನಿಂದ ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಪಂದಳಂನಲ್ಲಿ ನಡೆದಿದೆ.

ಸಾಜಿತ ಮೃತ ಮಹಿಳೆ. ಈಕೆ ಪಂದಳಂನ ತುಳಸಿ ಭವನ್​ ನಿವಾಸಿ. ಕಳೆದ ಶುಕ್ರವಾರ ರಾತ್ರಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಹತ್ಯೆಯಾಗಿದೆ.

ಕೊಲೆಯಾದ ದಿನ ಆಕೆಯೊಂದಿಗೆ ಇದ್ದ ಯುವಕ ಪರಾರಿಯಾಗಿದ್ದಾನೆ. ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿದಾಗ ತಲೆಗೆ ಏಟು ಬಿದ್ದಿರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಆ ಬಳಿಕ ಮಹಿಳೆಯೊಂದಿಗೆ ಪರಿಚಯವಿದ್ದ ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ತಿರುವನಂತಪುರಂನ ವೆಲ್ಲರದ ನಿವಾಸಿ ಶೈಜು ಎಂಬಾತ ಹಲವು ದಿನಗಳಿಂದ ಆಕೆಯೊಂದಿಗೆ ವಾಸವಿದ್ದ ಎಂದು ಶಂಕಿಸಲಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೃತ ಸಾಜಿತ, ಗಂಡನಿಂದ ಬೇರೆಯಾಗಿದ್ದಳು. ತಿರುವಳ್ಳದಲ್ಲಿ ಶಾಪ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಾಜಿತಾಗೆ ಫೇಸ್​ಬುಕ್​ ಮೂಲಕ ತಿರುವನಂತಪುರಂ ಮೂಲದ ಶೈಜು ಪರಿಚಯವಾಗಿದೆ.

ಇಬ್ಬರು ಬಾಡಿಗೆ ಮನೆಯಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದರು. ಅವರು ನೆರೆಹೊರೆಯವರೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಂಡಿರಲಿಲ್ಲ. ಹೀಗಾಗಿ ಅವರ ಬಗ್ಗೆ ಯಾರು ಗಮನ ವಹಿಸಿರಲಿಲ್ಲ. ಸಾಜಿತ ಗಾಯಗೊಂಡಿದ್ದಾರೆ ಎಂದು ಆಕೆಯ ಸ್ನೇಹಿತರು ಮಾಹಿತಿ ನೀಡಿದ ಬಳಿಕ ಪೊಲೀಸರು ಅವರ ಮನೆಗೆ ತಲುಪಿ, ಪರಿಶೀಲನೆ ನಡೆಸಿದಾಗ ಆಕೆ ಕೊಲೆಯಾಗಿರುವುದು ಬೆಳಕಿಗೆ ಬಂದಿತು.

ಪೊಲೀಸರು ಮನೆಗೆ ತಲುಪಿದಾಗ ಸಾಜಿತ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಆಕೆಯ ತಲೆಗೆ ಶೈಜು, ಮರದ ತುಂಡಿನಿಂದ ಹಲ್ಲೆ ಮಾಡಿರುವುದು ಕಂಡುಬಂದಿದೆ. ಶೈಜು ಫೋನ್ ಸ್ವಿಚ್ ಆಫ್ ಆಗಿದೆ. ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಯುವಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. (ಏಜೆನ್ಸೀಸ್​)