ನಿಮ್ಮ ಮೇಲಿರುವ ಆರೋಪಗಳಿಗೆ ಮೊದಲು ಉತ್ತರಿಸಿ ಸಿಎಂ ಬೊಮ್ಮಾಯಿ

ನಿಮ್ಮ ಮೇಲಿರುವ ಆರೋಪಗಳಿಗೆ ಮೊದಲು ಉತ್ತರಿಸಿ  ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಕಚೇರಿ ವಿರುದ್ಧ ಕಾಂಗ್ರೆಸ್‌ ನಾಯಕರು ಮಾಡಿರುವ ಟೆಂಡರ್‌ ಹಗರಣ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ನಿಮ್ಮ ಮೇಲಿರುವ ಆರೋಪಗಳಿಗೆ ಮೊದಲು ಉತ್ತರ ಕೊಡಿ.

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಜೆಪಿ ಉಸ್ತುವಾರಿಗಳ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಈ ಹಿಂದೆ ತಾವು ಮಾಡಿರುವ ಕರ್ಮಕಾಂಡ ನೆನಪಿಸಿಕೊಂಡು ಮಾತನಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ತನಿಖೆ ಮಾಡಿಸುತ್ತೇವೆ ಎಂದು ಧಮಕಿ ಹಾಕಿ ಗುತ್ತಿಗೆದಾರರನ್ನು ಬೆದರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಕಾಂಗ್ರೆಸಿಗರು ರಾಜ್ಯವನ್ನು ಸುಲಿಗೆ ಮಾಡಲಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೂಳಿಹಟ್ಟಿ ಶೇಖರ್‌ ಅವರು ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ನಾವು ಅವರಿಗೆ ಪತ್ರದ ಮೂಲಕ ನಿರ್ದಿಷ್ಟ ಪ್ರಕರಣವಿದ್ದರೆ ನೀಡಿ. ತನಿಖೆ ಮಾಡುತ್ತೇವೆಂದು ಕೇಳುತ್ತಿದ್ದೇವೆ. ಸದನದಲ್ಲಿಯೂ ಸ್ಪಷ್ಟವಾಗಿ ಕೇಳಿದ್ದೇನೆ. ಯಾವುದಾದರೂ ಅಧಿಕಾರಿ ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮಾಡಿದ್ದರೂ ತನಿಖೆ ಮಾಡುತ್ತೇವೆ ಎನ್ನುವುದು ನಮ್ಮ ನಿಲುವು ಎಂದು ಸ್ಪಷ್ಟಪಡಿಸಿದರು. ನಾವು ಅಧಿಕಾರಕ್ಕೆ ಬಂದ ಅನಂತರ ಟೆಂಡರ್‌ ಪರಿಶೀಲನ ಸಮಿತಿಯನ್ನು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನೇಮಕ ಮಾಡಿದ್ದೇವೆ. ಟೆಂಡರ್‌ ಪರಿಶೀಲನೆಯಾಗುತ್ತದೆ ಹಾಗೂ ಇಡೀ ಪ್ರಕ್ರಿಯೆ ಪಾರದರ್ಶಕವಾಗಿದೆ. ಯಾರು ಬೇಕಾದರೂ ದೂರು ನೀಡಬಹುದಾಗಿದೆ ಎಂದು ಸವಾಲು ಹಾಕಿದರು.

ಡಿ.ಕೆ. ಶಿವಕುಮಾರ್‌ ನೀರಾವರಿ ಸಚಿವರಿ¨ªಾಗ ಟೆಂಡರ್‌ ಪರಿಶೀಲನ ಸಮಿತಿಯನ್ನು ರದ್ದು ಮಾಡಿದ್ದರು. ಟಿಎಸಿಯನ್ನೂ ತೆಗೆದುಹಾಕಿದ್ದರು. ನಿಗಮದಲ್ಲಿ ಎರಡು ಹಂತದ ಪರಿಶೀಲನೆಯನ್ನು ಸ್ಥಗಿತಗೊಳಿಸಿದ ಕೀರ್ತಿ ಅವರಿಗೇ ಸಲ್ಲಬೇಕು. ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಟ್ಟಿದ್ದೇ ಶಿವಕುಮಾರ್‌. ನಾವು ಬಂದ ಅನಂತರ ಅದನ್ನು ಪುನಃ ಸ್ಥಾಪನೆ ಮಾಡಿದ್ದೇವೆ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು