ದೆಹಲಿಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲ್ಲ: ಯಡಿಯೂರಪ್ಪ

ದೆಹಲಿಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲ್ಲ: ಯಡಿಯೂರಪ್ಪ

ಬೆಂಗಳೂರು: ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲೆಂದು ದೆಹಲಿಗೆ ತೆರಳುತ್ತಿರುವೆ. ಅಲ್ಲಿಗೆ ಹೋದಾಗ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಕಾವೇರಿ ನಿವಾಸದ ಬಳಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿಎಸ್​ವೈ, ಚುನಾವಣಾ ದೃಷ್ಟಿಯಿಂದ ನಡೆಯುತ್ತಿರುವ ಈ ಸಭೆಯಲ್ಲಿ ಪಾಲ್ಗೊಂಡಾಗ ವರಿಷ್ಠರೆಲ್ಲರ ಭೇಟಿ ಸಹಜ.

ಔಪಚಾರಿಕವಾಗಿ ಮಾತುಕತೆಯಾಗಬಹುದೇ ಹೊರತು ರಾಜ್ಯ ರಾಜಕಾರಣ, ನಮ್ಮ ಪಕ್ಷದ ಬಗ್ಗೆ ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸದ್ಯಕ್ಕೆ ರಾಜ್ಯ ರಾಜಕಾರಣದ ಬಗ್ಗೆ ವರಿಷ್ಠರೊಂದಿಗೆ ಮಾತುಕತೆ ಪ್ರಶ್ನೆ ಉದ್ಭವವಾಗಿಲ್ಲ. ಇಂದು ಸಂಜೆ ಸಭೆಯಲ್ಲಿ ಭಾಗವಹಿಸಿ

ನಾಳೆ ಬೆಂಗಳೂರಿಗೆ ವಾಪಸ್ಸಾಗುವೆ ಎಂದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎಂದು ಕೇಳಿದವರಿಗೆ ಶಿಕಾರಿಪುರ ಎಂದು ತಿಳಿಸಿದ್ದೇನೆ. ಮುಂದಿನದು ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳಿದರು.

ಸಚಿವ ಸ್ಥಾನ ನೀಡದಿದ್ದರೆ ರಮೇಶ್ ಜಾರಕಿಹೊಳಿ ಜೆಡಿಎಸ್​ಗೆ ಹೋಗುತ್ತಾರೆ ಎಂಬ ಮಾಹಿತಿಯಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುತ್ತೀರಾ? ಎಂದು ಪತ್ರಕರ್ತರು ಕೇಳಿದಾಗ, ಗೊತ್ತಿಲ್ಲ ಎಂದು ಬಿಎಸ್​ವೈ ಹೇಳಿದರು.

ಅಕ್ಷಮ್ಯ ಅಪರಾಧ:ಹಿಂದುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಪಮಾನಿಸಿರುವುದು ಅಕ್ಷಮ್ಯ ಅಪರಾಧ. ಯಾರದೇ ಭಾವನೆಗಳಿಗೆ ಧಕ್ಕೆ ತರುವ ಮಾತನಾಡುವುದು ಸರಿಯಲ್ಲ. ವಿಳಂಬ ಮಾಡದೆ ಕ್ಷಮೆಯಾಚಿಸುವ ಜತೆಗೆ ಇನ್ನೊಮ್ಮೆ ಇಂತಹ ಮಾತು ಆಡುವುದಿಲ್ಲವೆಂದು ಸತೀಶ್ ಜಾರಕಿಹೊಳಿ ಹೇಳಬೇಕು ಎಂದು ಬಿಎಸ್​ವೈಆಗ್ರಹಿಸಿದರು.