ತುಮಕೂರು: 8 ಕ್ಷೇತ್ರಗಳಿಗೆ 'ಕೈ' ಅಭ್ಯರ್ಥಿಗಳ ಹೆಸರು ಪ್ರಕಟ- ಹಿರಿಯರಿಗೆ ಮಣೆ
ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆ ಟಿಕೆಟ್ ಬಯಸಿದವರಿಗೆ ಅವಕಾಶ ಸಿಕ್ಕಿದೆ.
ಕಾಂಗ್ರೆಸ್ ಹಿರಿ ತಲೆಗಳಿಗೆ ಮತ್ತೊಮ್ಮೆ ಮಣೆ ಹಾಕಲಾಗಿದೆ. ಮೊದಲ ಪಟ್ಟಿಗೆ ಶಿರಾ ಕ್ಷೇತ್ರವನ್ನು ಹೊರತುಪಡಿಸಿದರೆ ಇತರೆಡೆ ಆಕ್ಷೇಪಗಳು ವ್ಯಕ್ತವಾಗಿಲ್ಲ. ಒಂದು ಕ್ಷೇತ್ರಕ್ಕೆ ಒಬ್ಬರ ಹೆಸರು ಶಿಫಾರಸುಗೊಂಡಿದ್ದವರ ಪಟ್ಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಹಾಲಿ ಶಾಸಕರು ಹಾಗೂ ಮಾಜಿ ಶಾಸಕರಿಗೆ ಬಹುತೇಕ ಟಿಕೆಟ್ ನೀಡಲಾಗಿದೆ.
ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ನಗರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸೊರಗಿದ್ದು, ಸ್ಪರ್ಧೆಗೆ ಯಾರೂ ಮುಂದೆ ಬರುತ್ತಿಲ್ಲ. ಕೊನೆಗೆ ಯಾರಾದರೊಬ್ಬರನ್ನು ಕಣಕ್ಕಿಳಿಸಲು ಹೈಕಮಾಂಡ್ ಚಿಂತಿಸಿದೆ. ಜೆಡಿಎಸ್‌ನಿಂದ ಉಚ್ಚಾಟಿತರಾಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಜಿಲ್ಲೆಯ ಕಾಂಗ್ರೆಸ್ ಪಟ್ಟಿ ಅಂತಿಮಗೊಂಡಂತೆ ಆಗಲಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ) ನಿರೀಕ್ಷೆಯಂತೆ ಶಾಸಕ ಡಾ.ಜಿ.ಪರಮೇಶ್ವರ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಶಿರಾದಿಂದ ಮಾಜಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಸಾಸಲು ಸತೀಶ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಸಿಗುವ ಭರವಸೆಯೊಂದಿಗೆ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂದಿನ ನಡೆ ಕುತೂಹಲ ಮೂಡಿಸಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರದ ಪರಿಣಾಮ ಚುನಾವಣೆ ಮೇಲೆ ಬೀರಲಿದೆ.
ಮಧುಗಿರಿ ಕ್ಷೇತ್ರದಿಂದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಪಾವಗಡದಲ್ಲಿ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ) ಶಾಸಕ ವೆಂಕಟರಮಣಪ್ಪ ತಮ್ಮ ಪುತ್ರ ಎಚ್.ವಿ.ವೆಂಕಟೇಶ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವರು ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದ್ದರೂ ಅವಕಾಶ ಸಿಕ್ಕಿಲ್ಲ. ತಿಪಟೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಅವರಿಗೆ ಇನ್ನೊಮ್ಮೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ತೊರೆದು ಪಕ್ಷ ಸೇರ್ಪಡೆಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ.ಕಾಂತರಾಜು ಅವರನ್ನು ತುರುವೇಕೆರೆ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಕುಣಿಗಲ್ ಕ್ಷೇತ್ರದಿಂದ ನಿರೀಕ್ಷೆಯಂತೆ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಕುಣಿಗಲ್‌ನಿಂದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರೂ ಅವಕಾಶ ಸಿಕ್ಕಿಲ್ಲ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಕ್ಷೇತ್ರ; ಹೆಸರು
ಕೊರಟಗೆರೆ;ಡಾ.ಜಿ.ಪರಮೇಶ್ವರ
ಶಿರಾ;ಟಿ.ಬಿ.ಜಯಚಂದ್ರ
ಮಧುಗಿರಿ;ಕೆ.ಎನ್.ರಾಜಣ್ಣ
ಕುಣಿಗಲ್;ಡಾ.ಎಚ್.ಡಿ.ರಂಗನಾಥ್
ತಿಪಟೂರು;ಕೆ.ಷಡಕ್ಷರಿ
ಚಿಕ್ಕನಾಯಕನಹಳ್ಳಿ;ಕಿರಣ್‌ಕುಮಾರ್
ತುರುವೇಕೆರೆ;ಬಿ.ಎಂ.ಕಾಂತರಾಜ್
ಪಾವಗಡ;ಎಚ್.ವಿ.ವೆಂಕಟೇಶ್