ಜೋಡೋ ಯಾತ್ರೆ ಯಾರನ್ನ ಜೋಡಿಸುತ್ತಿದೆ, ಯಾರನ್ನು ಒಡೆಯುತ್ತಿದೆಂದು ಜಗತ್ತಿಗೆ ಗೊತ್ತಿದೆ: ಸಿಎಂ

ಜೋಡೋ ಯಾತ್ರೆ ಯಾರನ್ನ ಜೋಡಿಸುತ್ತಿದೆ, ಯಾರನ್ನು ಒಡೆಯುತ್ತಿದೆಂದು ಜಗತ್ತಿಗೆ ಗೊತ್ತಿದೆ: ಸಿಎಂ

ಬೆಂಗಳೂರು : ಭಾರತೀಯ ಜನತಾ ಪಕ್ಷ ಮತ್ತೊಮ್ಮೆ 2023ರ ಚುನಾವಣೆಯಲ್ಲಿ ವಿಜಯಶಾಲಿಯಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಭಾರತೀಯ ಜನತಾ ಪಕ್ಷ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ.

ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಇಂದು ಪ್ರಾರಂಭವಾಗುತ್ತಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಕಾರ್ಯಕ್ರಮಗಳು, ನೀತಿಗಳು ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಂದಾಗಿ ಒಂದೊಂದು ಕ್ಷೇತ್ರದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಅದನ್ನು ಜನರಿಗೆ ತಿಳಿಹೇಳಿ ಮುಂಬರುವ ಕಾರ್ಯಕ್ರಮಗಳನ್ನು ಯಾವ ವರ್ಗಗಳಿಗೆ ರೂಪಿಸಿದೆ, ಯಾವ ರೀತಿ ಲಾಭ ಪಡೆಯಬೇಕೆಂಬ ತೀರ್ಮಾನಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.

ಎಲ್ಲೆಡೆ ಉತ್ಸಾಹ
ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿ 2023 ರ ಚುನಾವಣೆಯಲ್ಲಿ ಮತ್ತೊಮ್ಮೆ ಭಾ.ಜ.ಪ ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲೆಡೆ ಬಹಳಷ್ಟು ಉತ್ಸಾಹವಿದೆ. ಜನಸಂಕಲ್ಪ ಯಾತ್ರೆ ಮೂಲಕ ಜನರ ವಿಶ್ವಾಸವನ್ನು ಗಳಿಸಿಸಲಾಗುವುದು ಎಂದರು.

ಸಮಾವೇಶದ ಜೊತೆ ಸ್ಥಳೀಯ ಕಾರ್ಯಕರ್ತರು ರೂಪಿಸಿದಂತೆ 2- 3 ಸಣ್ಣ ಪುಟ್ಟ ಕಾರ್ಯಕ್ರಮಗಳು ಇರಲಿವೆ. ಫಲಾನುಭವಿಗಳೊಂದಿಗೆ ಮಾತನಾಡುವುದು, ಬೇರೆ ಬೇರೆ ಕಡೆ ಭೇಟಿ ನೀಡುವುದು ಇರುತ್ತದೆ ಎಂದರು.

ಭಾರತ್ ಜೋಡೋ ಯಾತ್ರೆಗೆ ಮಹತ್ವವಿಲ್ಲ:
ಭಾರತ್ ಜೋಡೋ ಯಾತ್ರೆ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಜೋಡೋ ಯಾತ್ರೆ ಯಾರನ್ನು ಜೋಡಿಸುತ್ತಿದೆ, ಯಾರನ್ನು ಒಡೆಯುತ್ತಿದೆ ಎಂದು ಜಗತ್ತಿಗೆ ತಿಳಿದಿದೆ. ಅದಕ್ಕೆ ಯಾವ ಮಹತ್ವವೂ ಉಳಿದಿಲ್ಲ. ನಮ್ಮ ಕೆಲಸ, ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕೂ ಜನಸಂಕಲ್ಪ ಯಾತ್ರೆಗೂ ಸಂಬಂಧವಿಲ್ಲ ಎಂದರು.