ಮದುವೆಯಾಗದೆ ಮಕ್ಕಳು ಮಾಡಿಕೊಂಡವರಿಗೂ ಸರ್ಕಾರಿ ಸೌಲಭ್ಯ; ಜನಸಂಖ್ಯೆ ಹೆಚ್ಚಿಸಲು ಚೀನಾದ ಈ ಪ್ರಾಂತ್ಯದಿಂದ ಮಹತ್ವದ ಕ್ರಮ
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರ ಎಂಬ ಪಟ್ಟ ಪಡೆದಿದ್ದ ಚೀನಾದಲ್ಲಿ ಈಗ ಜನಸಂಖ್ಯೆ ಇಳಿಕೆಯಾಗುತ್ತಿದೆ. ಭಾರತ ಈಗ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವೆಂದು ಹೇಳಲಾಗುತ್ತಿದ್ದು, ಇಳಿಕೆಯಾಗಿರುವ ತನ್ನ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಚೀನಾ ಪ್ರಯತ್ನ ನಡೆಸುತ್ತಿದೆ.
ಹೀಗಾಗಿ ಈ ಮೊದಲು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ತಂದಿದ್ದ ಚೀನಾ ಸರ್ಕಾರ ಬಳಿಕ ಇದನ್ನು ಎರಡು ಮಗು ಎಂದು ಬದಲಾಯಿಸಿತ್ತು. ಈಗ ಒಂದು ಕುಟುಂಬ ಇಷ್ಟವಿದ್ದಷ್ಟು ಮಕ್ಕಳನ್ನು ಹೊಂದಬಹುದಾಗಿದ್ದು, ಜೊತೆಗೆ ಹಲವು ಸರ್ಕಾರಿ ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ. ಇದೀಗ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಅವಿವಾಹಿತರಿಗೂ ಮಕ್ಕಳನ್ನು ಹೊಂದುವ ಅವಕಾಶ ನೀಡಲಾಗುತ್ತಿದೆ.
ಈ ಪ್ರಾಂತ್ಯದಲ್ಲಿ ಈವರೆಗೆ ವಿವಾಹಿತ ಮಹಿಳೆಯರು ಮಾತ್ರವೇ ಮಕ್ಕಳನ್ನು ಹೆರಲು ಕಾನೂನಿನಲ್ಲಿ ಅವಕಾಶವಿದ್ದು, ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಾಹ ಮತ್ತು ಜನನ ದರ ದಾಖಲೆಯ ಮಟ್ಟದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಅವಿವಾಹಿತರು ಸಹ ಮಕ್ಕಳನ್ನು ಹೆರಬಹುದು ಎಂಬ ಕಾನೂನು ಜಾರಿಗೊಳಿಸಲಾಗಿದೆ. ಆದರೆ ಅದಕ್ಕೂ ಮುನ್ನ ಪ್ರಾಂತೀಯ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗಿದ್ದು, ಹೊಸ ನಿಯಮ ಫೆಬ್ರವರಿ 15 ರಿಂದ ಜಾರಿಗೆ ಬರಲಿದೆ.