ಜನರ ತೊಂದರೆಗೆ ಸ್ಪಂದಿಸದವರಿಗೆ ಅಧಿಕಾರ ವ್ಯರ್ಥ: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

ಜನರ ತೊಂದರೆಗೆ ಸ್ಪಂದಿಸದವರಿಗೆ ಅಧಿಕಾರ ವ್ಯರ್ಥ: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

ಧಾರವಾಡ: 'ನಾಗರಿಕ ಸಮಾಜದ ನೋವು, ತೊಂದರೆಗಳಿಗೆ ಸ್ಪಂದಿಸದ ಮತ್ತು ಜನರೊಂದಿಗೆ ಬೆರೆಯದ ಅಧಿಕಾರಿಗೆ ಎಷ್ಟೆ ಅಧಿಕಾರ ಕೊಟ್ಟರು ವ್ಯರ್ಥ' ಎಂದು ಪೊಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ. ಹರಿಶೇಖರನ್ ಹೇಳಿದರು.

7ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕವಾಯತು ವೀಕ್ಷಿಸಿದ ನಂತರ ಅವರು ಮಾತನಾಡಿದರು.

'ಪ್ರತಿ ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿರುವ ಅಧಿಕಾರ ಮತ್ತು ಅವಕಾಶಗಳನ್ಬು ಬಳಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಿ, ಇಲಾಖೆ ಮತ್ತು ಸರಕಾರಕ್ಕೆ ಕೀರ್ತಿ, ಗೌರವ ತರಬೇಕು. ಸಾರ್ವಜನಿಕ ಕರ್ತವ್ಯದಲ್ಲಿರುವ ಅಧಿಕಾರಿಗಳು ಅದರಲ್ಲೂ ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಸೌಹಾರ್ದಯುತ ಸಂಬಂಧ ಹೊಂದಿದ್ದರೆ ಮಾತ್ರ ಜನಸ್ನೇಹಿ ಪೊಲೀಸ್ ಆಗಲು ಸಾಧ್ಯ' ಎಂದರು.

'ಪೊಲೀಸ್ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳು ಅಸಹಾಯಕರ, ಬಡವರ ಬಗ್ಗೆ ಸದಾ ಕಾಳಜಿ ಹೊಂದಿರಬೇಕು. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಾರ್ವಜನಿಕರ ಸಂಪರ್ಕದ ಕೊರತೆ ಇದ್ದಾಗ ಅಲ್ಲಿ ಕಾನೂನು, ಸುವ್ಯವಸ್ಥೆಯ ಕೊರತೆ ಉಂಟಾಗುತ್ತದೆ. ಪೊಲೀಸ್ ಸಿಬ್ಬಂದಿ ಸಮಾಜದಲ್ಲಿ ಸಕ್ರಿಯ ಮತ್ತು ಪ್ರಾಮಾಣಿಕ ಪಾಲ್ಗೊಳ್ಳುವಿಕೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವದರೊಂದಿಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡಲು ಸಹಾಯವಾಗುತ್ತದೆ' ಎಂದರು.

'ಇಲಾಖೆಗೆ ಇತ್ತೀಚೆಗೆ ಪದವಿ, ಸ್ನಾತಕೋತ್ತರ ಪದವಿಧರರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಅರ್ಹತೆ ಇರುವ ಅಂತವರಿಗೆ ಹೆಚ್ಚುವರಿ ಜವಾಬ್ದಾರಿ, ಕಾಲಕಾಲಕ್ಕೆ ಪದೋನ್ನತಿ ನೀಡಲು ಸರಕಾರ ಕ್ರಮ ವಹಿಸಿದೆ. ತಾಂತ್ರಿಕ ಶಿಕ್ಷಣ ಪಡೆದ ಅನೇಕರು ಪೊಲೀಸ್ ಇಲಾಖೆಗೆ ಬರುತ್ತಿದ್ದು, ಅವರಿಗೆ ನೀಡುವ ತರಬೇತಿ ಪಠ್ಯದಲ್ಲಿ ಸೈಬರ್ ಅಪರಾಧ, ಸೆಲ್‌ಫೋನ್‌ ತಂತ್ರಜ್ಞಾನ ಮುಂತಾದ ಪ್ರಸ್ತುತ ಅಗತ್ಯ ಇರುವ ವಿಷಯಗಳನ್ನು ಸೇರಿಸಲಾಗುತ್ತಿದೆ' ಎಂದು ಹರಿಶೇಖರನ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ತರಬೇತಿ ಶಾಲೆಯ ಸ್ಮರಣ ಸಂಚಿಕೆ ಸ್ಫೂರ್ತಿ ಅನ್ನು ಬಿಡುಗಡೆ ಮಾಡಿದರು. ಪೋಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಿ. ಉಮೇಶ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.

ಪರೇಡ್ ಕಮಾಂಡರ್ ಬಸವರಾಜ ಬಿರಾದಾರ ಮತ್ತು ಸಿ.ನಾಗರಾಜ ಅವರ ಮುಂದಾಳತ್ವದಲ್ಲಿ ಪಥ ಸಂಚಲನ ನಡೆಯಿತು. ಕಲಬುರ್ಗಿ, ಬೆಂಗಳೂರು ನಗರ, ಉತ್ತರ ಕನ್ನಡ, ಬಿದರ್, ತುಮಕೂರು, ಉಡುಪಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ 19 ಘಟಕಗಳ 351 ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡರು.

ಮಹಿಳಾ ಪಿಎಸ್‌ಐ ವನಮಾಲಾ ದಾನಣ್ಣವರ ಬೆಂಗಾವಲಿನಲ್ಲಿ ಪರೇಡ್ ಮೈದಾನಕ್ಕೆ ರಾಷ್ಟ್ರಧ್ವಜವನ್ನು ಬರಮಾಡಿಕೊಳ್ಳಲಾಯಿತು.

ಶಿಗ್ಗಾಂವಿ ಕೆಎಸ್‌ಆರ್‌ಪಿ ತಂಡದ ಐ.ಎನ್.ಕಲಾದಗಿ, ಗದಗ ಸಶಸ್ತ್ರ ಮೀಸಲು ಪಡೆಯ ಜಿ.ಕೆ.ಖಾಜಿ ಮತ್ತು ಧಾರವಾಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಐ.ಡಿ.ತೇಗೂರ ಅವರ ನೇತೃತ್ವದ ತಂಡ ಪೋಲಿಸ್ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪೋಲಿಸ್ ವಾದ್ಯ ನುಡಿಸಿತು.

ಕಾರ್ಯಕ್ರಮದಲ್ಲಿ ಪೋಲಿಸ್ ಅಧಿಕಾರಿಗಳಾದ ಆರ್.ಬಿ.ಬಸರಗಿ, ಉಪ ಪ್ರಾಂಶುಪಾಲ ಡಿಎಸ್‌ಪಿ ಹರಿಶ್ಚಂದ್ರ ನಾಯ್ಕ, ಫೈಜುದ್ದೀನ, ಹಮಜಾ ಹುಸೇನ್‌, ಅಮ್ ಸಿದ್ದ ಗೋಂದಳಿ, ಶರಣಪ್ಪ ಸುಳಿಭಾವಿ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

ಬಹುಮಾನ ವಿಜೇತರು:

ಒಳಾಂಗಣ ಕ್ರೀಡಾಂಗಣ: ಸಿ.ನಾಗರಾಜ, ಎಂ.ಜೆ.ಗುರುಕಿರಣ, ಯಾಸೀನ್ ಮೌಲಾ ಕಾಳವಂತ್

ಹೊರಾಂಗಣ ವಿಭಾಗ: ವಿ. ಬಸವರಾಜ,ಮಹಾದೇವಸ್ವಾಮಿ, ಎಚ್. ಗುರುಸ್ವಾಮಿ

ಫೈರಿಂಗ್ ವಿಭಾಗ: ಎಚ್. ಗುರುಸ್ವಾಮಿ, ಶ್ರವಣಕುಮಾರ, ರವಿಕಿರಣ ಕೋಳಿ

ಸರ್ವೋತ್ತಮ ಪ್ರಶಿಕ್ಷಣಾರ್ಥಿ: ಚಿಕ್ಕಬಳ್ಳಾಪುರ ಜಿಲ್ಲೆಯ ಸಿ. ನಾಗರಾಜ