ಜನತಾ ಚಿತ್ರಮಂದಿರ, ಚಿತ್ರನಗರಿ ನಿರ್ಮಾಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ

ಜನತಾ ಚಿತ್ರಮಂದಿರ, ಚಿತ್ರನಗರಿ ನಿರ್ಮಾಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ಜನತಾ ಚಿತ್ರ ಮಂದಿರ ಮತ್ತು ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ನಿರ್ದೇಶಕರ ತಂಡಕ್ಕೆ ಭರವಸೆ ನೀಡಿದ ಸಿಎಂ, ಎಲ್ಲ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲನೆ ಮಾಡಲಾಗುವುದು ಎಂದರು.

ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಚಿತ್ರರಂಗದ ಪಾತ್ರವೂ ಮಹತ್ತರವಾಗಿದ್ದು, ಚಲನಚಿತ್ರಗಳನ್ನು ವೀಕ್ಷಣೆ ಮಾಡಲು ಬಸ್​ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿಯೇ ಹಿಂದೆ ರೂಪುಗೊಂಡಿದ್ದ ಜನತಾ ಚಿತ್ರಮಂದಿರ ಪರಿಕಲ್ಪನೆಯನ್ನು ಜಾರಿಗೆ ತರಬೇಕು ಎನ್ನುವ ನಿರ್ದೇಶಕರ ಮನವಿಗೆ ಸಿಎಂ ಸಮ್ಮತಿಸಿದ್ದಾರೆ.

ಜನತಾ ಚಿತ್ರಮಂದಿರಕ್ಕೆ ಅನುಮತಿ ಪಡೆಯಲು ಇರುವ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾ ವ್ಯವಸ್ಥೆಯಲ್ಲಿ ಪರವಾನಗಿ ಪಡೆಯಲು ಕ್ರಮ ವಹಿಸಲಾಗುವುದು ಎಂದ ಸಿಎಂ, ಮೈಸೂರಿನಲ್ಲಿ ಚಿತ್ರನಗರಿ ಮಾಡುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ. ಅಲ್ಲಿಯೇ ಚಿತ್ರನಗರಿ ಮಾಡುವುದು ಸೂಕ್ತ ಎನ್ನುವ ನಿರ್ದೇಶಕರ ಅಭಿಪ್ರಾಯಕ್ಕೂ ಬೊಮ್ಮಾಯಿ ಅಸ್ತು ಎಂದಿದ್ದಾರೆ.

ಚಲನಚಿತ್ರ ನೀತಿ ಮಾಡಬೇಕು ಎನ್ನುವ ಪ್ರಸ್ತಾವ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆಯೂ ಗಮನಹರಿಸಬೇಕು ಎಂದು ನಿರ್ದೇಶಕರು ಒತ್ತಾಯಿಸಿದರು. ಈ ಬಗ್ಗೆ ಇರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಕಾನೂನು ಸಚಿವರು ಮತ್ತು ಗೃಹ ಸಚಿವರಿಗೆ ಮುಖ್ಯಮಂತ್ರಿಗಳು ಜವಬ್ದಾರಿ ವಹಿಸಿದರು.

ಸಬ್ಸಿಡಿ ಮತ್ತು ಪ್ರಶಸ್ತಿ: ಚಿತ್ರ ನಿರ್ಮಾಣ ಮಾಡಿದ ವರ್ಷವೇ ಆಯಾ ಚಿತ್ರಗಳಿಗೆ ಸಬ್ಸಿಡಿ ಬಿಡುಗಡೆ ಮಾಡುವ ವ್ಯವಸ್ಥೆ ಆಗಬೇಕು. ಕಳೆದ 3 ವರ್ಷಗಳಿಂದ ಸಬ್ಸಿಡಿ ಕೊಡದೆ ಇರುವ ಕಾರಣ ಸಂಕಷ್ಟ ಎದುರಿಸುವಂತಾಗಿದೆ. ಅದೇ ರೀತಿ ಪ್ರತಿ ವರ್ಷವೂ ಪ್ರಶಸ್ತಿಗಳನ್ನು ನೀಡುವ ವ್ಯವಸ್ಥೆ ಆಗಬೇಕು ಎಂದು ನಿರ್ದೇಶಕರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಸಾಲಗಾಮೆ ನಂಜುಂಡೇಗೌಡ, ನಿರ್ದೇಶಕರಾದ ರಾಜೇಂದ್ರ ಸಿಂಗ್​ ಬಾಬು, ನಾಗತಿಹಳ್ಳಿ ಚಂದ್ರಶೇಖರ್​, ಟಿ.ಎನ್​.ಸೀತಾರಾಂ, ಪಿ.ಶೇಷಾದ್ರಿ, ಗಿರೀಶ್​ ಕಾಸರವಳ್ಳಿ, ಲಿಂಗದೇವರು, ಕೃಷ್ಣೇಗೌಡ, ಬಿ.ರಾಮಮೂರ್ತಿ ಮತ್ತಿತರರು ಹಾಜರಿದ್ದರು.