ಘಟಾನುಘಟಿ ನಾಯಕರನ್ನು ಮಣಿಸಲು ತಂತ್ರ: ಬಿಜೆಪಿ ಸಭೆಯಲ್ಲಿ ಚರ್ಚೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲು ರಾಜಿ ಮಾಡಿಕೊಳ್ಳದೇ ಕಠಿಣ ಸ್ಪರ್ಧೆ ಒಡ್ಡುವ ಉತ್ತಮ ಅಭ್ಯರ್ಥಿಗಳ ಆಯ್ಕೆ, ಪಕ್ಷದ ಸಂಘಟನೆಯನ್ನು ಬಲಪಡಿಸಲು ಆದ್ಯತೆ ನೀಡುವುದರ ಜತೆಗೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನೂ ಸೋಲಿಸಲು ತಂತ್ರ ಹೆಣೆಯುವ ಬಗ್ಗೆಯೂ ಚರ್ಚೆ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಭಾನುವಾರ ರಾತ್ರಿ ನಡೆದ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಚುನಾವಣೆಗೆ 'ಮೈದಾನ ಸಜ್ಜು'ಗೊಳಿಸುವುದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಯಾವುದೇ ಕ್ಷೇತ್ರದಲ್ಲೂ ವಿರೋಧಿ ಪಕ್ಷಗಳ ನಾಯಕರ ಬಗ್ಗೆ ಲವಲೇಶವೂ ಅನುಕಂಪ ತೋರದೇ ಹೋರಾಟ ನಡೆಸಬೇಕು ಎಂಬುದಾಗಿ ಅಮಿತ್ ಶಾ ಹೇಳಿದರೆಂದು ಬಿಜೆಪಿ ಮೂಲಗಳು ತಿಳಿಸಿವೆ. ನಾಯಕರು ಪರಸ್ಪರ ತಮ್ಮ ಸೀಟುಗಳನ್ನು ಉಳಿಸಿಕೊಳ್ಳಲು ವಿರೋಧಿ ಪಕ್ಷಗಳ ನಾಯಕರ ಜತೆ ಒಳ ಒಪ್ಪಂದ ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಸಂಘಟಿತವಾಗಿ ಗರಿಷ್ಠ ಪ್ರಯತ್ನ ಹಾಕುವ ಮೂಲಕ 'ಮಿಷನ್- 150' ತಲುಪಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಗುಜರಾತ್ ಚುನಾವಣೆಗಳಲ್ಲಿ ಬಹುಮತ ಪಡೆಯಲು ಸಾಧ್ಯವಾಯಿತು. ಆ ಫಲಿತಾಂಶ ಕರ್ನಾಟಕದಲ್ಲೂ ಪುನರಾವರ್ತನೆಯಾಗಬೇಕು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಗೆಲುವು ಮುಂಬರುವ ಲೋಕಸಭೆಗೆ ಮುನ್ನುಡಿಯಾಗಬೇಕು ಎಂದು ಶಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ಎಸ್.ಯಡಿಯೂರಪ್ಪ, ಪ್ರಲ್ಹಾದ ಜೋಶಿ, ಬಿ.ಎಲ್.ಸಂತೋಷ್, ಮನ್ಸುಖ್ ಮಾಂಡವಿಯ, ಕೆ.ಅಣ್ಣಾಮಲೈ, ಶೋಭಾ ಕರಂದ್ಲಾಜೆ, ಬಿ.ವೈ.ವಿಜಯೇಂದ್ರ, ರಮೇಶ ಜಾರಕಿಹೊಳಿ ಸೇರಿ ಎಲ್ಲ ಪ್ರಮುಖ ನಾಯಕರು ಭಾಗವಹಿಸಿದ್ದರು.