ಬೇಲೂರು- ಹಾಸನ ರಾಷ್ರೀಯ ಹೆದ್ದಾರಿ ವಿಸ್ತರಣೆಗೆ 698.08 ಕೋಟಿ ರೂ. ಅನುದಾನ ಬಿಡುಗಡೆ: ನಿತಿನ್‌ ಗಡ್ಕರಿ

ಬೇಲೂರು- ಹಾಸನ ರಾಷ್ರೀಯ ಹೆದ್ದಾರಿ ವಿಸ್ತರಣೆಗೆ 698.08 ಕೋಟಿ ರೂ. ಅನುದಾನ ಬಿಡುಗಡೆ: ನಿತಿನ್‌ ಗಡ್ಕರಿ

ಬೆಂಗಳೂರು, ಮಾರ್ಚ್‌, 27: ರಾಜ್ಯದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಡುಗೆಗಳ ಸರಮಾಲೆಯೇ ಹರಿದುಬರುತ್ತಿದೆ. ಇದೀಗ ಹಲವು ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿ ಅನುದಾನವನ್ನು ಬಿಡುಗಡೆ ಮಾಡಿದೆ.

ಹಾಗೆಯೇ ಬೇಲೂರು- ಹಾಸನ ನಡುವಿನ ಹೆದ್ದಾರಿ ವಿಸ್ತರಣೆಗೂ ಅನುದಾನದವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ.

698.08 ಕೋಟಿ ರೂ. ಅನುಮೋದನೆ

ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ಕರ್ನಾಟಕದಲ್ಲಿನ ಬೇಲೂರು- ಹಾಸನ ವಿಭಾಗದ NH 373 ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರ್ಕಾರ 698.08 ಕೋಟಿ ರೂ. ಅನುಮೋದನೆ ನೀಡಿದೆ. ವಾರ್ಷಿಕ ಯೋಜನೆ 2022-23ರ ಅಡಿಯಲ್ಲಿ ಈ ಯೋಜನೆಯನ್ನು ಎಂಜಿನಿಯರಿಂಗ್, ಇಪಿಸಿ ಮೋಡ್‌ನಲ್ಲಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೆದ್ದಾರಿಗಳು ಅಭಿವೃದ್ಧಿಯಾಗಲಿವೆ

ಕರ್ನಾಟಕ ರಾಜ್ಯದ ವಿವಿಧೆಡೆ ಇರುವು ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಲಿವೆ. ಆದಷ್ಟು ಶೀಘ್ರವೇ ಕೋಟ್ಯಂತರ ರೂಪಾಯಿ ಹಣದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದ್ದು, ಈ ಸಂಬಂಧದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇತ್ತೀಚೆಗಷ್ಟೇ ಈ ಕುರಿತಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರು ಸರಣಿ ಟ್ವೀಟ್ ಮಾಡಿದ್ದರು. ಗತಿ ಶಕ್ತಿ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಕರ್ನಾಟಕ ಪ್ರಗತಿಯ ಪಥದಲ್ಲಿದೆ ಎಂದು ತಿಳಿಸಿದ್ದರು.

ಯಾವ ಭಾಗಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿ?

ಗತಿ ಶಕ್ತಿ ಯೋಜನೆಯಡಿ ಕರ್ನಾಟಕದ ಒಟ್ಟು ಸುಮಾರು ಆರು ಕಡೆಗಳಲ್ಲಿ ಅಂದಾಜು ಮೊತ್ತ 3,579 ಕೋಟಿ ಹಣದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿವೆ. ಈ ಸಂಬಂಧದ ಪ್ರಸ್ತಾವ ಹಾಗೂ ಕಾಮಗಾರಿ ಆರಂಭಕ್ಕೆ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯವು ಅನುಮತಿ ನೀಡಿದೆ.

ನೆರೆ ರಾಜ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯ ರಾಷ್ಟ್ರೀಯ ಹೆದ್ದಾರಿ 166 E ಯಲ್ಲಿ ಕನಮಡಿಯಿಂದ ಬಿಜ್ಜೋಡಿ ಮತ್ತು ತಿಕೋಟಾ ದ್ವಿಪಥ ರಸ್ತೆಯು ರೂ.196.05 ಕೋಟಿ ಹಣದಲ್ಲಿ ವಿಸ್ತರಣೆಯಾಗಲಿದೆ. ಇನ್ನು ಮಹಾರಾಷ್ಟ್ರ ಗಡಿಯ ರಾಷ್ಟ್ರೀಯ ಹೆದ್ದಾರಿ 548 B ಯಲ್ಲಿ ಮುರುಂ-ಐಬಿ ವೃತ್ತದವರೆಗೆ ರೂ.957 ಕೋಟಿ ಅಂದಾಜು ವೆಚ್ಚದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಸರ್ಕಾರದ ಈ ನಿರ್ಧಾಗಳಿಂದ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ಕಲಬುರಗಿ ಭಾಗದ ಜಿಲ್ಲೆಗಳು/ಪಟ್ಟಣಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದರು.

ಬಯಲು ಸೀಮೆ ಭಾಗಗಳಾದ ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಭಾನಾಪುರ-ಗದ್ದನಕೇರಿ ವಿಭಾಗದ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡದಲ್ಲಿ ಬೈಪಾಸ್‌ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಒಟ್ಟು ಸುಮಾರು 333.96 ಕೋಟಿ ರೂಪಾಯಿ ತಗುಲಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಇನ್ನೂ ಮಧ್ಯ ಕರ್ನಾಟಕ ಎನ್ನಲಾಗುವ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಜೇಂದ್ರಗಡದಲ್ಲಿ ಅಂದರೆ ಭೂಸ್ವಾಧೀನ ಒಳಗೊಂಡು ಉಣಚಗೇರಿ-ಕೊಡಗಾನೂರ- ಪುರ್ತಗೇರಿ ಹಾಗೂ ರಾಜೂರ ಒಳಗೊಂಡ ಬೈಪಾಸ್‌ ನಿರ್ಮಾಣಕ್ಕೆ 110 ಕೋಟಿ ವೆಚ್ಚ ಆಗಲಿದೆ. ಇದರಲ್ಲಿ ಭೂಸ್ವಾಧೀನ ವೆಚ್ಚವೂ ಸೇರಿದೆ ಎಂದು ಸಂಸದರಾದ ಶಿವಕುಮಾರ್‌ ಉದಾಸಿ ಮಾಹಿತಿ ನೀಡಿದ್ದರು.

ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯ ಸರ್ಜಾಪುರದಿಂದ ಪಟ್ಟಣಕಲ್ಲುವರೆಗಿನ ರಾಷ್ಟ್ರೀಯ ಹೆದ್ದಾರಿಯು ಒಟ್ಟು ಅಂದಾಜು 445.62 ಕೋಟಿ ರೂಪಾಯಿಯಲ್ಲಿ ವಿಸ್ತರಣೆ ಆಗಲಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮೈಸೂರು ಹಾಗೂ ಕುಶಾಲನಗರ ಭಾಗದಲ್ಲಿ ₹909.86 ಕೋಟಿ ಮೊತ್ತದಲ್ಲಿ ನಾಲ್ಕು ಪಥಗಳ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಗಡ್ಕರಿಯವರು ತಿಳಿಸಿದ್ದರು.

ಕುಶಾಲನಗರ ಬೈಪಾಸ್‌ನ ಪ್ರಾರಂಭದಲ್ಲಿ ಗುಡ್ಡೆ ಹೊಸೂರಿನಿಂದ ಈ ಕಾಮಗಾರಿ ನಡೆಸಲಾಗುತ್ತದೆ. ಅದೇ ರೀತಿಯಲ್ಲಿ, ಇಲವಾಲ-ಕೆ.ಆರ್.ನಗರ ರಸ್ತೆ ಜಂಕ್ಷನ್‌ನ ಯಲಚಹಳ್ಳಿಯಿಂದ ಶ್ರೀರಂಗ ಪಟ್ಟಣದ ಬೈಪಾಸ್‌ವರೆಗೆ ನಾಲ್ಕು ಪಥದ ಹೆದ್ದಾರಿ ಅಭಿವೃದ್ಧಿ ಮಾಡಲಾಗುವುದು. ಈ ಯೋಜನೆಗೆ ₹739.39 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಯೋಜನೆಗಳಿಗೆ ಸಹ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದರು.