ಕ್ಯಾಲಿಫೋರ್ನಿಯಾ ಶೂಟಿಂಗ್ ಆರೋಪಿ ಆತ್ಮಹತ್ಯೆ: ವ್ಯಾನ್ನಲ್ಲಿ ಹೆಣವಾಗಿದ್ದ ವೃದ್ಧ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಂಡಿನ ದಾಳಿಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಮಾಂಟೆರಿ ಪಾರ್ಕ್ನಲ್ಲಿ ಚೀನಾದ ಹೊಸ ವರ್ಷದ ಆಚರಣೆಯನ್ನು ಭಾನುವಾರ ಆಯೋಜಿಸಲಾಗಿತ್ತು.
ಎಲ್ಲರೂ ಒಂದೆಡೆ ಸೇರಿ ಸಂಭ್ರಮಾಚರಣೆ ನಡೆಸುತ್ತಿರುವಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೆಷಿನ್ ಗನ್ ಹಿಡಿದ ವ್ಯಕ್ತಿಯೊಬ್ಬ ಜನರ ಮೇಲೆ ಗುಂಡು ಹಾರಿಸಿದ. ಈ ಘಟನೆಯಲ್ಲಿ ಹತ್ತು ಮಂದಿ ಸಾವನ್ನಪ್ಪಿ, ಹತ್ತಾರು ಮಂದಿ ಗಾಯಗೊಂಡರು. ಘಟನೆ ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೇ ವೇಳೆ ಗುಂಡಿನ ದಾಳಿ ನಡೆಸಿದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಸುತ್ತುವರಿದಿದ್ದಾರೆ.
ಭದ್ರತಾ ಪಡೆಗಳು ಸುತ್ತುವರಿದಿರುವುದನ್ನು ಕಂಡ ಆರೋಪಿ ಮಷಿನ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕಿತನನ್ನು 72 ವರ್ಷದ ಹೂ ಕ್ಯಾನ್ ಟ್ರಾನ್ ಎಂದು ಗುರುತಿಸಲಾಗಿದೆ. ಪೊಲೀಸರು ವ್ಯಾನ್ ಬಳಿ ಬರುತ್ತಿರುವುದನ್ನು ಕಂಡು ಗುಂಡು ಹಾರಿಸಿಕೊಂಡು ಹೆಣವಾಗಿದ್ದಾನೆ. ಪೊಲೀಸರು ಆತನ ದೇಹವನ್ನು ವಶಪಡಿಸಿಕೊಂಡಿದ್ದಾರೆ. ಗುಂಡಿನ ದಾಳಿಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ.
ಘಟನೆಯಲ್ಲಿ ಬೇರೆ ಯಾವುದೇ ಶಂಕಿತರು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಎಲ್ಲ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸತ್ತವರಿಗೆ ಶ್ರದ್ಧಾಂಜಲಿಯಾಗಿ ಯುಎಸ್ ರಾಷ್ಟ್ರೀಯ ಧ್ವಜಗಳನ್ನು ಕೆಳಗಿಳಿಸಲು ಅಧ್ಯಕ್ಷ ಜೋ ಬಿಡನ್ ಆದೇಶಿಸಿದ್ದಾರೆ.