ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆರೋಗ್ಯ ಸಲಕರಣೆಗಳ ಹಂಚಿಕೆ ಕುರಿತು ಡಾ.ದೇವಿಶೆಟ್ಟಿ ಸಲಹೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆರೋಗ್ಯ ಸಲಕರಣೆಗಳ ಹಂಚಿಕೆ ಕುರಿತು ಡಾ.ದೇವಿಶೆಟ್ಟಿ ಸಲಹೆ

ನವದೆಹಲಿ, ಜೂ.18- ಕೋವಿಡ್ ಲಸಿಕೆಯ ಖರೀದಿ ಪ್ರಕ್ರಿಯೇ ಕೇಂದ್ರಿಕೃತವಾಗಿ ನಡೆದು, ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕು, ಆರೋಗ್ಯ ಸಲಕರಣೆಗಳ ಮೇಲಿನ ದರವನ್ನು ನಿಯಂತ್ರಿಸಬೇಕು ಎಂಬವು ಸೇರಿದಂತೆ ಎಂಟು ಪ್ರಮುಖ ಸಲಹೆಗಳನ್ನು 21 ಮಂದಿ ತಜ್ಞರ ತಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿದೆ.

ದೇಶದ ತಜ್ಞ ವೈದ್ಯರಾದ ಡಾ.ದೇವಿಶೆಟ್ಟಿ, ಉದ್ಯಮಿ ಕಿರಣ್ ಮಜೂಂದಾರಶಾ ಸೇರಿದಂತೆ 21 ಮಂದಿ ವೈದ್ಯರು ವ್ಯಕ್ತಪಡಿಸಿರುವ ಅಭಿಪ್ರಾಯ ಆಧರಿಸಿ ಲ್ಯಾನ್ಸೆಂಟ್ ಎಂಬ ವೈದ್ಯಕೀಯ ವಾರ ಪತ್ರಿಕೆ ಎಂಟು ಸಲಹೆಗಳನ್ನು ಪ್ರಕಟಿಸಿದೆ. ಕೋವಿಡ್ ನಿಂದ ಉಂಟಾಗುವ ಪ್ರಾಣ ಹಾನಿ ಹಾಗೂ ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಕೋವಿಡ್ ಪರಿಸ್ಥಿತಿ ಜಿಲ್ಲೆಯಿಂದ ಜಿಲ್ಲೆಗೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆಯಾಗಿದೆ. ಎಲ್ಲವನ್ನೂ ಒಂದೇ ಅಳತೆಯಲ್ಲಿ ನೋಡಬಾರದು. ಜಿಲ್ಲಾ ಮಟ್ಟದಲ್ಲಿ ಸ್ವಾಯತ್ತ ಅಧಿಕಾರ ಹೊಂದಿರುವ ಕಾರ್ಯಪಡೆಯನ್ನು ರಚಿಸಬೇಕು. ಅದಕ್ಕೆ ಅಗತ್ಯ ಹಣಕಾಸು ಹಾಗೂ ಇತರ ಸೌಲಭ್ಯ ನೀಡಿ ಬಲವರ್ಧನೆ ಮಾಡಬೇಕು.

ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಪರಿಕರಗಳ ಬೆಲೆ ದುಬಾರಿಯಾಗಿದ್ದು, ಆರೋಗ್ಯ ಕ್ಷೇತ್ರ ಮತ್ತು ಸಾರ್ವಜನಿಕರಿಗೆ ಹೊರೆಯಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚ ದುಬಾರಿಯಾಗುವಂತೆ ಮಾಡಿದೆ. ಸಲಕರಣೆ ಹಾಗೂ ಸೇವೆಗಳ ಬೆಲೆಯನ್ನು ವೈಜ್ಞಾನಿಕವಾಗಿ ನಿರ್ಧಸಬೇಕು ಹಾಗೂ ಲಭ್ಯ ಇರುವ ವಿಮಾ ಸೌಲಭ್ಯದಲ್ಲೇ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಹೆಚ್ಚುವರಿ ವೆಚ್ಚಗಳನ್ನುನಿಭಾಯಿಸಲು 15ನೆ ಹಣಕಾಸು ಆಯೋಗದ ಸಲಹೆ ಆಧರಿಸಿ ಅನುದಾನವನ್ನು ಹಂಚಿಕೆ ಮಾಡಬೇಕು ಎಂದು ಹೇಳಿದ್ದಾರೆ.

ಸ್ಪಷ್ಟ ಮಾಹಿತಿ ಮಾತ್ರ ಪ್ರಸಾರವಾಗುವಂತೆ ಎಚ್ಚರಿಕೆ ವಹಿಸಬೇಕು. ಜನರಲ್ಲಿ ಆತಂಕ ಸೃಷ್ಟಿಸುವ ಮಾಹಿತಿಗಳಿಗೆ ಕಡಿವಾಣ ಹಾಕಿ, ಪುರಾವೆ ಸಹಿತ, ಪ್ರಯೋಗಾತ್ಮಕ ಹಾಗೂ ಕರಾರುವಕ್ಕಾದ ಮಾಹಿತಿ ಮಾತ್ರ ಜನರಿಗೆ ತಲುಪಬೇಕು ಎಂದು ಸೂಚಿಸಲಾಗಿದೆ.

ಕೋವಿಡ್ ಹೊರತಾದ ಆರೋಗ್ಯ ಸಮಸ್ಯೆಗಳಿಗೆ ಕೈಗೆಟಕುವ ಹಾಗೂ ಸುಲಭವಾಗಿ ಲಭ್ಯವಾಗುವ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು. ಗ್ರಾಮೀಣ ಭಾಗಗಳಿಗೆ ತಜ್ಞ ವೈದ್ಯರ ಸಲಹೆ ಪೂರೈಸಲು ಟೆಲಿ ಮೆಡಿಷನ್ ಮತ್ತು ಟೆಲೆ ಕನ್ಸಲೆಟೇಷನ್ ಸೇವೆ ಬಳಸಿಕೊಳ್ಳಬೇಕು.

ವೈದ್ಯಕೀಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಕೊರತೆಯಾಗದಂತೆ ಎಲ್ಲಾ ವೈದ್ಯರು, ವೈದ್ಯಕೀಯೇತರ ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು. ಖಾಸಗಿ ಕ್ಷೇತ್ರದಲ್ಲಿರುವವರು, ಆಯುಷ್ ಹಾಗೂ ಆಲೋಪತಿ ವೈದ್ಯ ಪದ್ಧತಿಯಲ್ಲಿ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರನ್ನು ಬಳಸಿಕೊಳ್ಳಬೇಕು.

ಕೋವಿಡ್ ನಿಯಂತ್ರಣದ ಲಸಿಕೆಯ ಖರೀದಿಯನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಮಾಡಬೇಕು, ಎಲ್ಲಾ ರಾಜ್ಯಗಳಿಗೆ ಅಗತ್ಯಾನುಸಾರ ಹಂಚಿಕೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚಿಸಲು ಎನ್ ಜಿ ಒ ಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ತೆರವು ಮಾಡಬೇಕು, ಕೋವಿಡ್ ಸಂಬಂಧಿಸಿದ ಸೋಂಕಿತರು, ಸಾವನ್ನಪ್ಪಿದವರು, ಸೇರಿದಂತೆ ಎಲ್ಲ ಮಾಹಿತಿ ಸಂಗ್ರಹದಲ್ಲೂ ಪಾರದರ್ಶಕತೆ ಜಾರಿಗೆ ತರಬೇಕು.

ಕೊರೊನಾ ಕಾರಣಕ್ಕೆ ಎದುರಾಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಕ್ರಮ ಕೈಗೊಳ್ಳಬೇಕು, ಕೆಲಸ ಕಳೆದುಕೊಂಡವರನ್ನು ಮರು ನೇಮಕ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.