ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

ನ್ಯೂಯಾರ್ಕ್‌: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಇದರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎನ್ನಲಾಗಿದೆ.

ಮುಳುಗಿದ ದೋಣಿಯ ಬಳಿ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹಗಳು ಎರಡು ಕುಟುಂಬಗಳದ್ದು ಎಂದು ಹೇಳಲಾಗುತ್ತಿದೆ. ಇದರಲ್ಲಿ ಒಂದು ಕುಟುಂಬ ಭಾರತೀಯರಾಗಿದ್ದರೆ, ಇನ್ನೊಂದು ಕುಟುಂಬ ರೊಮೇನಿಯಾ ಮೂಲದವರಾಗಿದ್ದು, ಇವರಿಂದ ಕೆನಡಾದ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದೆಡೆ, ಕೆನಡಾ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದಾರೆ.

'ಒಟ್ಟು ಎಂಟು ಮೃತದೇಹಗಳನ್ನು ಈಗ ನೀರಿನಿಂದ ಹೊರತೆಗೆಯಲಾಗಿದೆ. ಇದರಲ್ಲಿ ಆರು ವಯಸ್ಕರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ' ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸೀನ್ ಡುಲುಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ 6 ಜನರ ಮೃತದೇಹಗಳನ್ನು ಗುರುವಾರ ತಡರಾತ್ರಿ ಹೊರತೆಗೆಯಲಾಯಿತು. ನಂತರ ಶವ ಪತ್ತೆಯಾದ ಇಬ್ಬರಲ್ಲಿ ರೊಮೇನಿಯನ್ ಮೂಲದ ಶಿಶು ಮತ್ತು ಭಾರತೀಯ ಮಹಿಳೆ ಸೇರಿದ್ದಾರೆ.