ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ

ಕುರುಬೂರು ಶಾಂತಕುಮಾರ್
ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ
ಪ್ರತೀ ಸಾರ್ವತ್ರಿಕ ಚುನಾವಣೆ ಬಂದಾಗ ಪಕ್ಷಗಳು ವಿವಿಧ ಭರವಸೆಗಳನ್ನು ಹೊತ್ತ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವುಗಳ ಅನುಷ್ಠಾನವನ್ನು ಮರೆತು ಬಿಡುತ್ತವೆ.
ಆದ್ದರಿಂದ ಚುನಾವಣ ಪೂರ್ವ ದಲ್ಲಿ ಹೊರಡಿಸುವ ಪ್ರಣಾಳಿಕೆಯನ್ನು ಅಧಿಕಾರಕ್ಕೆ ಬಂದ ಬಳಿಕ ಕಡ್ಡಾಯ ವಾಗಿ ಜಾರಿಗೊಳಿಸುವ ಕಾನೂನನ್ನು ಮೊದಲು ಜಾರಿಗೆ ತರಬೇಕು ಎಂಬುದು ನನ್ನ ಆಗ್ರಹ. ಪಕ್ಷಗಳ ಪ್ರಣಾಳಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಪ್ರಸ್ತಾವ ಪ್ರಣಾಳಿಕೆಯಲ್ಲಿ ಇರಬೇಕು.
ಉಳಿದಂತೆ ರಾಜ್ಯದ ರೈತರು ಹತ್ತು ಹಲವು ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಭದ್ರತೆ ನೀಡುವ, ಆದಾಯ ಹೆಚ್ಚಿಸುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಪಕ್ಷಗಳು ಪ್ರಕಟಿಸಬೇಕೆಂಬ ಆಗ್ರಹವಿದೆ. ಈ ನಿಟ್ಟಿನಲ್ಲಿ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಒದಗಿಸುವುದು ಅತೀ ಪ್ರಮುಖ ಬೇಡಿಕೆಯಾಗಿದೆ.
ಹಗಲು ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆಗಳ ನಿರಂತರ ವಿದ್ಯುತ್ ಪೂರೈಸುವ ಭರವಸೆಯನ್ನು ರೈತರಿಗೆ ನೀಡಬೇಕು.
ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ಸಹಕಾರಿ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳೆಂಬ ತಾರತಮ್ಯವಿಲ್ಲದೆ ಮಿತಿಯಿ ಲ್ಲದೆ ಎಲ್ಲ ಸಾಲ ಮನ್ನಾ ಮಾಡುವ ಖಾತರಿ ನೀಡಬೇಕು.
ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ಜಾರಿ ಮಾಡುವ ಭರವಸೆ ನೀಡಬೇಕು. ಡಾ| ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು
ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ತಂದು ಎಲ್ಲ ಬೆಳೆಗಳಿಗೂ ಅನ್ವಯ ಮಾಡಬೇಕು.
ರೈತರ ಕೃಷಿ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಭೂ ಸ್ವಾಧೀನ ಪಡಿಸಿಕೊ ಳ್ಳುವುದು ಅನಿವಾರ್ಯವಾದ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು.
ಕೃಷಿ ಭೂಮಿ ಸಂಪತ್ತು, ನೈಸರ್ಗಿಕ ಸಂಪತ್ತು, ನೀರಿನ ಸದ್ಬಳಕೆ ಕುರಿತು ಗಂಭೀರ ಚಿಂತನೆ ನಡೆಸುವ ಭರವಸೆ ಬೇಕು. ಗ್ರಾಮೀಣ ಯುವಕರ ವಲಸೆ ತಪ್ಪಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು, ಕೃಷಿ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಭರವಸೆ ಬೇಕು.
ಕೃಷಿ ಉತ್ಪನ್ನ, ಹಾಗೂ ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿಷೇಧವೇರಬೇಕು. ವಿದೇಶಿ ಕಂಪೆನಿಗಳ ಚಿಲ್ಲರೆ ಮಾರಾಟ ವ್ಯವಸ್ಥೆಗೆ ನಿಷೇಧವಿರಬೇಕು.