ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶಾರ್ದೂಲ್, ಸೀಫರ್ಟ್ ಬಿಡುಗಡೆ

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶಾರ್ದೂಲ್, ಸೀಫರ್ಟ್ ಬಿಡುಗಡೆ

ವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡಲ್ಲಿ ಕ್ಯಾಪಿಟಲ್ಸ್ ತಂಡದ ಶಾರ್ದೂಲ್ ಠಾಕೂರ್, ಕೆ.ಎಸ್. ಭರತ್ ಹಾಗೂ ನ್ಯೂಜಿಲೆಂಡ್‌ ಆಟಗಾರ ಟಿಮ್ ಸೀಫರ್ಟ್ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ.

ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡುವ ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ನವೆಂಬರ್ 15 ಕೊನೆಯ ದಿನವಾಗಿದೆ.

ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಹೊಸ ಆಟಗಾರರನ್ನು ಖರೀದಿಸುವ ಅವಕಾಶ ತಂಡಗಳಿಗೆ ಇರುವುದರಿಂದ ಈಗ ಕೆಲವು ಆಟಗಾರರನ್ನು ಬಿಡುಗಡೆ ಮಾಡುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ ಆವೃತ್ತಿಯಲ್ಲಿ ಶಾರ್ದೂಲ್ ಅವರನ್ನು ₹ 10.75 ಕೋಟಿ ಕೊಟ್ಟು ಖರೀದಿಸಿತ್ತು. 14 ಪಂದ್ಯಗಳನ್ನು ಆಡಿದ್ದ ಅವರು ಪ್ರತಿ ಓವರ್‌ಗೆ ಸರಾಸರಿ 10 ರನ್ ನೀಡಿದ್ದರು. ಬ್ಯಾಟಿಂಗ್‌ನಲ್ಲಿ 120 ರನ್‌ಗಳನ್ನು ಗಳಿಸಿದ್ದರು.

ಈ ಮೂವರಲ್ಲದೇ ಮನದೀಪ್ ಸಿಂಗ್ ಮತ್ತು ಆಂಧ್ರ ತಂಡದ ಆರಂಭಿಕ ಆಟಗಾರ ಅಶ್ವಿನ್ ಹೆಬ್ಬಾರ್ ಅವರನ್ನು ಬಿಡುಗಡೆ ಮಾಡುವುದಾಗಿ ತಂಡದ ಮೂಲಗಳು ತಿಳಿಸಿವೆ.