ಐಪಿಎಲ್‌ನಲ್ಲಿ ಈ 7 ನಾಯಕರ ವಿರುದ್ಧ ರೋಹಿತ್ ಶರ್ಮಾ ಒಂದು ಪಂದ್ಯವನ್ನೂ ಗೆದ್ದಿಲ್ಲ!

ಐಪಿಎಲ್‌ನಲ್ಲಿ ಈ 7 ನಾಯಕರ ವಿರುದ್ಧ ರೋಹಿತ್ ಶರ್ಮಾ ಒಂದು ಪಂದ್ಯವನ್ನೂ ಗೆದ್ದಿಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕ. ಮುಂಬೈ ಇಂಡಿಯನ್ಸ್ ತಂಡದ ಹಾಲಿ ನಾಯಕನಾಗಿರುವ ರೋಹಿತ್ ಶರ್ಮಾ 2013, 2015, 2017, 2019 ಹಾಗೂ 2020ರಲ್ಲಿ ಐಪಿಎಲ್ ಟೂರ್ನಿ ಗೆದ್ದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿದ್ದಿದ್ದಾರೆ.

ವಿಶ್ವದ ಬಹುತೇಕ ನಾಯಕರು ರೋಹಿತ್ ಶರ್ಮಾ ಮಾಡಿರುವ ಈ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದು ನಿಜ.

ಆದರೆ ರೋಹಿತ್ ಶರ್ಮಾ ನಾಯಕನಾಗಿ ಅತ್ಯಂತ ಹೆಚ್ಚು ಯಶಸ್ಸು ಸಾಧಿಸಿದ್ದರು ಕೂಡ ಪ್ರತಿ ಆವೃತ್ತಿಯಲ್ಲಿಯೂ ರೋಹಿತ್ ಪಡೆಯಿಂದ ಅತ್ಯುತ್ತಮ ಪ್ರದರ್ಶನ ಬಂದಿಲ್ಲ. ಅದರಲ್ಲೂ ಕೆಲ ನಾಯಕರು ರೋಹಿತ್ ಶರ್ಮಾ ವಿರುದ್ಧ 100 ಪ್ರತಿಶತ ಗೆಲುವಿನ ಸರಾಸರಿ ಹೊಂದಿದ್ದಾರೆ. ಅಂದರೆ ರೋಹಿತ್ ಶರ್ಮಾ ಹಲವು ನಾಯಕರ ವಿರುದ್ಧ ಒಂದು ಪಂದ್ಯವನ್ನು ಕೂಡ ಗೆದ್ದಿಲ್ಲ. ಅಂತಾ ಏಳು ನಾಯಕರ ಮಾಹಿತಿ ಇಲ್ಲಿದೆ.

ಆಡಂ ಗಿಲ್‌ಕ್ರಿಸ್ಟ್ ರೋಹಿತ್ ವಿರುದ್ಧ ಸೋತಿಲ್ಲ: ಆಡಂ ಗಿಲ್‌ಕ್ರಿಸ್ಟ್ ಹಾಗೂ ರೋಹಿತ್ ಶರ್ಮಾ 2009ರಲ್ಲಿ ಜೊತೆಯಾಗಿ ಡೆಕ್ಕನ್ ಚಾರ್ಜಸ್ ಪರವಾಗಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದ್ದರು. 2013ರಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಾಗ ಗಿಲ್‌ಕ್ರಿಸ್ಟ್ ಪಂಜಾಬ್ ಕಿಂಗ್ಸ್ ತಂಡದ ನಾಯಕಾಗಿದ್ದರು. ಆ ಆವೃತ್ತಿಯಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆದ್ದು ಬೀಗಿತ್ತು.

ರೋಹಿತ್ ವಿರುದ್ಧ ಅಜೇಯ ಸಾಧನೆ ಮಾಡಿದ್ದಾರೆ ಆರ್‌ಸಿಬಿ ನಾಯಕ: 2022ರಲ್ಲಿ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡವನ್ನು ಮೊದಲ ಬಾರಿಗೆ ಮುನ್ನಡೆಸುವ ಜವಾಬ್ಧಾರಿ ವಹಿಸಿಕೊಂಡರು. ಆ ಆವೃತ್ತಿಯಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದಾಗ ಆರ್‌ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಆರ್‌ಸಿಬಿ ತಂಡ ಮೊದಲ ಮುಖಾಮುಖಿಯಲ್ಲಿ ಅಮೋಘ ಗೆಲುವು ಸಾಧಿಸಿದ್ದು ಮತ್ತೊಮ್ಮೆ ರೋಹಿತ್ ಶರ್ಮಾ ಫಾಫ್ ವಿರುದ್ಧ ಹಿನ್ನಡೆ ಕಂಡಿದ್ದಾರೆ.

ರೋಹಿತ್ ವಿರುದ್ಧ ರವೀಂದ್ರ ಜಡೇಜಾ ಕೂಡ ಸೋತಿಲ್ಲ: 2022ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರವೀಂದ್ರ ಜಡೇಜಾ ಮುನ್ನಡೆಸಿದ್ದಾಗ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಅಮೋಘ ಗೆಲುವು ಸಾಧಿಸಿತ್ತು. ಧೋನಿ ಭರ್ಜರಿ ಗೆಲುವು ರೋಹಿತ್ ಶರ್ಮಾ ತಂಡಕ್ಕೆ ನಿರಾಸೆಯುಂಟಾಗುವಂತೆ ಮಾಡಿತ್ತು.

ಮುರಳಿ ವಿಜಯ್: ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಲವು ಆವೃತ್ತಿಗಳಲ್ಲಿ ಹಿನ್ನಡೆಯುಂಟು ಮಾಡಿದೆ. 2016-17ರ ಆವೃತ್ತಿಯಲ್ಲಿ ಮುರಳಿ ವಿಜಯ್ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಆ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿತ್ತು. ಹೀಗಾಗಿ ಮುರಳಿ ವಿಜಯ್ ವಿರುದ್ಧ ಕೂಡ ರೋಹಿತ್ ಗೆಲುವು ಕಂಡಿಲ್ಲ.

ಮಯಾಂಕ್ ಅಗರ್ವಾಲ್: 2022ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಮಯಾಂಕ್ ಅಗರ್ವಾಲ್ ನಾಯಕನಾಗಿ ಯಶಸ್ಸು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ಒಂದು ಬಾರಿ ಮುಖಾಮುಖಿಯಾಗಿದ್ದಾಗ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿತ್ತು.

ಕುಮಾರ್ ಸಂಗಕ್ಕರ: 2013ರ ಐಪಿಎಲ್ ಆವೃತ್ತಿಯಲ್ಲಿ ಕುಮಾರ್ ಸಂಗಕ್ಕರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೆಲ ಪಂದ್ಯಗಳಲ್ಲಿ ಮುನ್ನಡೆಸಿದ್ದರು.ಈ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದಾಗ ರೋಹಿತ್ ಶರ್ಮಾ ಪಡೆಗೆ ಎಸ್‌ಆರ್‌ಹೆಚ್ ಸೋಲುಣಿಸಿತ್ತು. ಹೀಗಾಗಿ ರೋಹಿತ್ ಸಂಗಕ್ಕರ ವಿರುದ್ಧವೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ಅಜಿಂಕ್ಯಾ ರಹಾನೆ: ರೋಹಿತ್ ಶರ್ಮಾ ಓರ್ವ ನಾಯಕನ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿಯೂ ಸೋಲು ಕಂಡಿದ್ದಾರೆ. ಅದು ಬೇರೆ ಯಾರೂ ಅಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಅಜಿಂಕ್ಯಾ ರಹಾನೆ ವಿರುದ್ಧ. ಆಡಿದ ಮೂರು ಪಂದ್ಯಗಳಲ್ಲಿಯೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಅಜಿಂಕ್ಯಾ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋಲು ಕಂಡಿತ್ತು