ಇವರ ಯೋಗ್ಯತೆಗೆ ರಸ್ತೆಗುಂಡಿ ಮುಚ್ಚಲು ಆಗಿಲ್ಲ; ಮೋದಿಗಾಗಿ ರಸ್ತೆ ಮಾಡೋದಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ಬೆಂಗಳೂರಿನ ರಸ್ತೆಗುಂಡಿಗೆ 8 ಜನರು ಬಲಿಯಾದರೂ, ಕೋರ್ಟ್ ಛೀಮಾರಿ ಹಾಕಿದರೂ ಬೇಜವಾಬ್ದಾರಿ ಮುಂದುವರೆಸಿದ್ದ ಪಾಲಿಕೆ ಅಧಿಕಾರಿಗಳು ಈಗ ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ರಸ್ತೆಗುಂಡಿ ಮುಚ್ಚುತ್ತಿದ್ದಾರೆ.
ರಾಜ್ಯ ಸರ್ಕಾರದ ಈ ಕಾರ್ಯವೈಖರಿಗೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇವರ ಯೋಗ್ಯತೆಗೆ ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಆಗಿಲ್ಲ. ಈಗ ಮೋದಿ ಬರ್ತಾರೆ ಅಂತ ಗುಂಡಿಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋರ್ಟ್ ಛೀಮಾರಿ ಹಾಕಿತು ಇವರ ಕೆಲಸಕ್ಕೆ ಆದರೂ ಬುದ್ಧಿಬರಲಿಲ್ಲ. ಈಗ ಮೋದಿಗಾಗಿ ರಸ್ತೆಗುಂಡಿ ಮುಚ್ಚುತ್ತಿದ್ದಾರೆ. ಮೋದಿ ಬಂದು ಹೋದ್ಮೇಲೇ ರಸ್ತೆಗಳೂ ಕಿತ್ತು ಹೋಗುತ್ತವೆ. ಈ ಹಿಂದೆ ಪ್ರಧಾನಿ ಮೋದಿ ಬರ್ತಾರೆ ಅಂತ ಡಾಂಬರ್ ಹಾಕಿದ್ರು. ಆದರೆ ಏನಾಯ್ತು? ಅವರು ವಾಪಸ್ ಹೋದ ಒಂದೇ ವಾರದಲ್ಲಿ ರಸ್ತೆಗಳು ಕಿತ್ತು ಬಂದವು. ದೇಶದ ಪ್ರಧಾನಿ ಬರ್ತಾರೆ ಅಂತ ಮಾಡಲಿ. ಬೇಡ ಅನ್ನಲ್ಲ, ಆದರೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಗುಂಡಿಮುಚ್ಚ ಬೇಕು ಕೇವಲ ಮೋದಿಗಾಗಿ ರಸ್ತೆ ಮಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.