ಆಸ್ತಿ ಕೊಡಲ್ಲ, ಮದುವೆ ಮಾಡಿಸಲ್ಲ ಎಂದು ಮನನೊಂದು ಪ್ರಾಣ ತ್ಯಾಗ ಮಾಡಿದ ಯುವಕ ಸಾವಿನಲ್ಲೂ ಶಾಲಾ ಪ್ರೇಮ ಮೆರೆದ

ಆಸ್ತಿ ಕೊಡಲ್ಲ, ಮದುವೆ ಮಾಡಿಸಲ್ಲ ಎಂದು ಮನನೊಂದು ಪ್ರಾಣ ತ್ಯಾಗ ಮಾಡಿದ ಯುವಕ ಸಾವಿನಲ್ಲೂ ಶಾಲಾ ಪ್ರೇಮ ಮೆರೆದ

ಬಾಗಲಕೋಟೆ: ಈ 22 ವರ್ಷದ ಯುವಕ, ತನ್ನ ಮಾವಂದಿರು ನೀಡಬೇಕಾಗಿದ್ದ ಆಸ್ತಿ ನೀಡಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಅಕ್ಕನಿಗೆ ಮಕ್ಕಳಿಲ್ಲ ಎಂದು ಈತನನ್ನು ದತ್ತು ನೀಡಲಾಗಿತ್ತು.

ಅಕ್ಕನ ಗಂಡ ಮೃತಪಟ್ಟ ಬಳಿಕ ಅಕ್ಕನ ಮೈದುನರು ಆಸ್ತಿಯಲ್ಲಿ ಪಾಲು ನೀಡುವುದಿಲ್ಲ ಎಂದು ಕುಳಿತುಕೊಂಡಿದ್ದರು.

ಈ ಹಿಂದೆ ಅಕ್ಕ ವಿಧವೆಯಾದಾಗ ಮಗಳನ್ನು ಕೊಟ್ಟು ಮದುವೆ ಮಾಡ್ತಿವಿ, ನಾಲ್ಕು ಎಕರೆ ಆಸ್ತಿ ಕೊಡ್ತೀವಿ ಎಂದಿದ್ದರು. ಆದರೆ ಈಗ ಅವರು ಚವರೆಸೆ ಬದಲಿಸಿದ್ದು ಕೈ ಕೊಟ್ಟಿದ್ದಾರೆ.

ಹೀಗೆ, ತನಗೆ ಬರಬೇಕಿದ್ದ ನಾಲ್ಕು ಎಕರೆ ಆಸ್ತಿ, ಮದುವೆ ಬಗ್ಗೆ ಮೋಸದಿಂದ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹೂವನೂರು ಗ್ರಾಮದಲ್ಲಿ ನಡೆದಿದ್ದು ನಾಗರಾಜ ಕಳ್ಳಿಗುಡ್ಡ(22) ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ತನ್ನ ವಾಟ್ಸ್​ಆಯಪ್ ಸ್ಟೇಟಸ್​ನಲ್ಲಿ ಡೆತ್​ನೋಟ್ ಬರೆದಿದ್ದು ತನ್ನ ಮಾವಂದಿರಾದ (ಅಕ್ಕನ ಮೈದುನರು) ಅಂದಾನೆಪ್ಪ ,ರಾಮು,ಶಿವು ಹೆಸರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

'ನನ್ನ ಸಾವಿಗೆ ಇವರೇ ಕಾರಣ, ನನಗೆ ಬರಬೇಕಿದ್ದ ನಾಲ್ಕು ಎಕರೆ ಆಸ್ತಿ ಕೊಡದೆ ಮೋಸ ಮಾಡಿದರು. ರಾಮಣ್ಣ ನಂಬಿಸಿ ಕುತ್ತಿಗೆ ಕೊಯ್ದಿದ್ದಾನೆ. ಊರಿನ ಜನ ಈ ಐದು ಜನ ಅಣ್ತಮ್ಮಂದಿರನ್ನು ನಂಬಬೇಡಿ. ನನ್ನ ಅಂತ್ಯಸಂಸ್ಕಾರ ಇದೇ ಊರಲ್ಲೇ ಮಾಡಿ. ಅಕ್ಕ ಅವ್ವ, ಸ್ನೇಹಿತರೆ ನನ್ನ ಕ್ಷಮಿಸಿ' ಎಂದು ಡೆತ್ ನೋಟಲ್ಲಿ ಉಲ್ಲೇಖ ಮಾಡಿದ್ದಾನೆ.

ಸಾವಿನಲ್ಲಿ ಶಾಲಾ ಪ್ರೇಮ ಮೆರೆದ ಯುವಕ!
ಈತ ತನ್ನ ಸಾವಿನಲ್ಲೂ ಶಾಲಾ ಪ್ರೇಮ ಮೆರೆದಿದ್ದು ಡೆತ್​ನೋಟ್​ನಲ್ಲಿ 'ನನ್ನ ಹೆಸರಲ್ಲಿ ಈಗಾಗಲೇ ಇರುವ ನಾಲ್ಕು ಎಕರೆ ಜಾಗದಲ್ಲಿ 2 ಎಕರೆ ಶಾಲೆಗೆ ದಾನ ನೀಡಿ ಅಲ್ಲಿ ಸರಕಾರಿ ಶಾಲೆ ಕಟ್ಟಿಸಿ. ನಮ್ಮೂರಿನ ಎಲ್ಲ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ. ನನ್ನ ಜಾಗ ಪಡದು ನಮ್ಮೂರ ಎಲ್ಲ‌ ಮಕ್ಕಳಿಗೂ ಅನುಕೂಲ ಮಾಡಿಕೊಡಬೇಕು' ಎಂದು ಮನವಿ ಮಾಡಿದ್ದಾನೆ. ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನಿನ್ನೆ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.