ಆಕಾಂಕ್ಷಿಗಳ ಚೆಕ್ಮೇಟ್ ಹಾಲಿಗಳಿಗೆ ಕೈತಪ್ಪಲಿದೆಯೇ ಟಿಕೆಟ್?; ಕೆಪಿಸಿಸಿ ಅಧ್ಯಕ್ಷರು ಖಾತ್ರಿ ಕೊಟ್ಟರೂ ಕಾಡಿದೆ ಅನುಮಾನ
ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ, ಅಧಿಕಾರಕ್ಕೆ ಬರುವುದು ಖಚಿತ ಎಂಬ ಮಾತನ್ನು ಆ ಪಕ್ಷದ ನಾಯಕರು ಪದೇಪದೆ ಬಲವಾಗಿ ಹೇಳಿಕೊಂಡ ಬಂದ ಕಾರಣ ಕೈ ಟಿಕೆಟ್ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಆಕಾಂಕ್ಷಿಗಳು ಶತಾಯಗತಾಯ ಟಿಕೆಟ್ ಪಡೆದುಕೊಳ್ಳಲು ಪಟ್ಟುಹಾಕುತ್ತಿದ್ದಾರೆ.
ಈ ನಡುವೆ ಹಾಲಿ ಶಾಸಕರಲ್ಲಿ ಹತ್ತಕ್ಕಿಂತ ಹೆಚ್ಚು ಮಂದಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದ್ದು, ಹೀಗಾಗಿ ಅವಕಾಶ ತಪ್ಪಬಹುದೆಂಬ ಲೆಕ್ಕಾಚಾರದಲ್ಲಿ ಹಲವು ಶಾಸಕರು ನಾಯಕರ ಮನೆಯ ಕಂಬ ಸುತ್ತುತ್ತಿದ್ದಾರೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷರ ಭೇಟಿಗೆ ಬಂದಿದ್ದ ಶಾಸಕರೊಬ್ಬರು ಮಾಧ್ಯಮ ಪ್ರತಿನಿಧಿಗಳ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ.
ಬೆಳಗಾವಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಟಿಕೆಟ್ಗೆ ಅರ್ಜಿ ಕರೆದಿದ್ದರ ಬಗ್ಗೆ ಆಕ್ಷೇಪವೂ ಕೇಳಿಬಂದಿತ್ತು. ಪಕ್ಷದ ಶಾಸಕರಿಲ್ಲದ ಕಡೆ ಟಿಕೆಟ್ ಕರೆಯಬಹುದಿತ್ತು, ನಾವು ಶಾಸಕರಿರುವಾಗ ಅರ್ಜಿ ಕರೆದಿರುವುದರಿಂದ ಹಲವು ಅರ್ಜಿ ಸಲ್ಲಿಸಿ ನಾನೆ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ, ಇದು ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲವೇ ಎಂದು ಕೆಲವರು ದನಿ ಎತ್ತಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷರು ಶಾಸಕರಿಗೆಲ್ಲ ಟಿಕೆಟ್ ಖಾತ್ರಿಯ ಭರವಸೆ ನೀಡಿದ್ದರು. ಜತೆಗೆ, ಪಕ್ಷದೊಳಗಿನ ನಿಮ್ಮ ಸ್ಪರ್ಧಿ ಯಾರೆಂಬುದು ತೋರಿಸಿಕೊಟ್ಟಿದ್ದೇವೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸೂಚ್ಯವಾಗಿ ಶಾಸಕರಿಗೆ ತಿಳಿಸಿಕೊಟ್ಟಿದ್ದರು.
ಇಷ್ಟರ ನಡುವೆ ಹಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿ ಗಾಢವಾಗಿ ಹರಿದಾಡಿದೆ. ಅಲ್ಲದೇ ಮೂರು ರೀತಿಯ ಲೆಕ್ಕಾಚಾರಕ್ಕೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಒಂದು, 12-15 ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಕಠಿಣವಾಗಲಿದೆ, ಹೀಗಾಗಿ ಅಭ್ಯರ್ಥಿ ಬದಲಿಸುವುದು ಸೂಕ್ತ ಎಂದು ಸಮೀಕ್ಷೆ ನಡೆಸಿದ ತಂಡ ವರದಿ ಕೊಟ್ಟಿತ್ತು. ಎರಡನೇಯದು, ಬಿಜೆಪಿ ಹೊಸ ಮುಖದ ಲೆಕ್ಕಾಚಾರದಲ್ಲಿ ಹಲವು ಹಾಲಿ ಶಾಸಕರನ್ನು ಕೈಬಿಟ್ಟು ಜನರಿಗೆ ಸಂದೇಶ ಕಳಿಸುತ್ತದೆ, ಈ ಅಸ್ತ್ರಕ್ಕೆ ಪ್ರತಿಯಾಗಿ ತಮ್ಮ ಕಡೆಯಿಂದಲೂ ಗಮನ ಸೆಳೆಯುವಂತಹ ತೀರ್ಮಾನ ಆಗಬೇಕೆಂಬ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದೆ. ಮೂರನೇಯದಾಗಿ, ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ಷೇತ್ರಗಳನ್ನು ಕಳೆದುಕೊಳ್ಳದೇ ಇದ್ದರೆ ಮ್ಯಾಜಿಕ್ ನಂಬರ್ ಬರಲು ಸಾಧ್ಯವಿಲ್ಲ.
ಹೀಗಾಗಿ, ಸೋಲುವ ಕ್ಷೇತ್ರಗಳಲ್ಲಿ ಎಲ್ಲ ರೀತಿಯಲ್ಲೂ 'ವಿಶೇಷ ಸಾಮರ್ಥ್ಯ' ಇರುವ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂಬ ಬಗ್ಗೆಯೂ ತೀರ್ವನವಾಗಿದ್ದು, ಪರೋಕ್ಷವಾಗಿ ಕ್ಷೇತ್ರದಲ್ಲಿ ಕೆಲಸ ಶುರುಮಾಡುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಪ್ರಮುಖರ ಸೂಚನೆಯಂತೆ ಕೆಲವು ಕಡೆ ರಿಯಲ್ ಎಸ್ಟೇಟ್ ಉದ್ಯಮಿಗಳು, ಹಣಕಾಸಲ್ಲಿ ಬಲಿಷ್ಠವಾದವರನ್ನು ಗುರುತಿಸಿ, ಟಿಕೆಟ್ಗೆ ಅರ್ಜಿ ಹಾಕಲೂ ಸಹ ಸೂಚಿಸಲಾಗಿತ್ತು ಎಂಬ ಮಾತುಗಳು ಪಕ್ಷದಲ್ಲಿದೆ.
ಶಿಡ್ಲಘಟ್ಟ, ಪಾವಗಡ, ಹರಿಹರ ಸೇರಿ ಹತ್ತು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬದಲು ಬೇರೆಯವರಿಗೆ ಟಿಕೆಟ್ ಕೊಡುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ಬಿಜೆಪಿಯಲ್ಲಿ ಹೊಂದಾಣಿಕೆಯಾಗದ ಕೆಲವು ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡಲಾಗಿದ್ದು, ವೈಯಕ್ತಿಕವಾಗಿ ಆಹ್ವಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾರ್ಯಕ್ರಮವೇ ಮುಂದಕ್ಕೆ: ಪ್ರಿಯಾಂಕಾ ವಾದ್ರಾ ಅವರನ್ನು ಕರ್ನಾಟಕಕ್ಕೆ ಕರೆತರಬೇಕೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಂತರ ಪ್ರಯತ್ನ ಈ ವರೆಗೂ ಫಲಕೊಟ್ಟಿಲ್ಲ. ಜನವರಿ 6ರಂದು ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ಆಯೋಜನೆಗೊಳಿಸಿದ್ದು, ಪ್ರಿಯಾಂಕಾಗೆ ಆಹ್ವಾನ ನೀಡಲಾಗಿತ್ತು. ಅವರು ತಮ್ಮ ಆಗಮನ ಖಚಿತ ಪಡಿಸದ ಹಿನ್ನೆಲೆಯಲ್ಲಿ ಕಾರ್ಯಕ್ರಮವೇ ಕೊನೆ ಹಂತದಲ್ಲಿ ಮುಂದೂಡಲ್ಪಟ್ಟಿದೆ. ಜತೆಗೆ ತಮ್ಮ ಪ್ರಯತ್ನ ಕೈಬಿಡದ ಡಿ.ಕೆ.ಶಿವಕುಮಾರ್ ಖುದ್ದು ಆಹ್ವಾನ ನೀಡುವ ಪ್ರಯತ್ನ ನಡೆಸಿದ್ದಾರೆ. ಜ.6ರಂದು ನಾ ನಾಯಕಿ ಸಮಾವೇಶ ನಡೆಸುವ ಬಗ್ಗೆ, ಪೂರ್ವ ತಯಾರಿ ಕುರಿತು ಡಿ.ಕೆ.ಶಿವಕುಮಾರ್ ಪಕ್ಷದ ಪದಾಧಿಕಾರಿಗಳು, ಶಾಸಕರು, ಟಿಕೆಟ್ ಆಕಾಂಕ್ಷಿಗಳಿಗೆ ಪತ್ರ ಬರೆದು ಆಹ್ವಾನ ನೀಡಿದ್ದರು.