ಅಂತರ ಜಿಲ್ಲಾ ವಿಶೇಷ ಕರ್ತವ್ಯಕ್ಕೆ ಪೊಲೀಸರ ವಿರೋಧ

ಅಂತರ ಜಿಲ್ಲಾ ವಿಶೇಷ ಕರ್ತವ್ಯಕ್ಕೆ ಪೊಲೀಸರ ವಿರೋಧ

ಬೆಂಗಳೂರು: ಅಂತರ ಜಿಲ್ಲೆಯ ವರ್ಗಾವಣೆಗೆ ಅವಕಾಶ ನೀಡದ ಸರ್ಕಾರವು ಅಂತರ ಜಿಲ್ಲಾ ಬಂದೋಬಸ್ತ್‌ಗೂ ನೇಮಿಸಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ತಮ್ಮ ಅಳಲು ಕುರಿತು ಬರೆದಿರುವ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

'ಅಂತರ ಜಿಲ್ಲಾ ವರ್ಗಾವಣೆ ಪದ್ಧತಿ ರದ್ದು ಮಾಡಿದ್ದು, ಪೊಲೀಸರಿಗೆ ತೊಂದರೆಯಾಗಿದೆ. ನಮ್ಮದು ಕಚೇರಿಯಲ್ಲಿ ಕುಳಿತು ಮಾಡುವ ಕೆಲಸ ಅಲ್ಲ. ಬಂದೋಬಸ್ತ್‌ಗೆಂದು ಪ್ರತಿ ಪೊಲೀಸ್‌ 15ರಿಂದ 25 ಕಿ.ಮೀ ತನಕ ತೆರಳುತ್ತಾನೆ. ಅಲ್ಲದೇ ಚಿಕ್ಕಮಗಳೂರಿನ ದತ್ತಪೀಠ, ಮೈಸೂರಿನ ದಸರಾ, ಬೆಳಗಾವಿ ಅಧಿವೇಶನ ಹಾಗೂ ಕೋಮು ಗಲಭೆ ನಡೆದರೆ ದೂರದ ಜಿಲ್ಲೆಗಳಿಗೆ ವಿಶೇಷ ಕರ್ತವ್ಯದ ಹೆಸರಿನಲ್ಲಿ ಕಳುಹಿಸುತ್ತಾರೆ. ನಮಗೂ ಪತ್ನಿ ಹಾಗೂ ಮಕ್ಕಳು ಇದ್ಧಾರೆ. ವಿಶೇಷ ಕರ್ತವ್ಯಕ್ಕೆ ತೆರಳಿದರೆ, ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆ ತರಲೂ ಯಾರೂ ಇರುವುದಿಲ್ಲ. ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ ಅನ್ನುವ ಸರ್ಕಾರವು ನಮ್ಮನ್ನೇಕೆ ಅಂತರ ಜಿಲ್ಲಾ ಕರ್ತವ್ಯಕ್ಕೆ ನಿಯೋಜಿಸಬೇಕು' ಎಂದು ಪೊಲೀಸರು ಪ್ರಶ್ನಿಸಿದ್ಧಾರೆ.

'ವಾಸ್ತವ್ಯದ ಸ್ಥಳದಿಂದ ಕರ್ತವ್ಯಕ್ಕೆ ಸ್ವಂತ ವಾಹನವನ್ನೇ ಬಳಸಬೇಕು. ಬಿಎಂಟಿಸಿಯಲ್ಲಿ ತೆರಳುವುದಕ್ಕೆ ಟ್ರಾಫಿಕ್‌ನಿಂದ ವಿಳಂಬವಾಗಲಿದೆ. ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ, ನಿಯೋಜಿಸಿದ್ದ ಬಂದೋಬಸ್ತ್ ಸ್ಥಳಕ್ಕೆ ತೆರಳುವುದಕ್ಕೆ ₹ 200 ಖರ್ಚಾಗಿದೆ. ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್‌ಗೆ ಹೋಗಲು ಸಂಬಳದ ಹಣವನ್ನೇ ಖರ್ಚು ಮಾಡಿದ್ದೇವೆ. ಆದ್ದರಿಂದ, ಪೆಟ್ರೋಲ್‌ ಕಾರ್ಡ್‌ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

'ಹಬ್ಬಗಳ ಸಂದರ್ಭದಲ್ಲಿ ಇಡೀ ನಗರವೇ ಹಬ್ಬದ ಸಂಭ್ರಮದಲ್ಲಿ ಇರುತ್ತದೆ. ಆದರೆ, ಪೊಲೀಸ್ ಕುಟುಂಬದಲ್ಲಿ ಯಾವ ಸಂಭ್ರಮವೂ ಇರುವುದಿಲ್ಲ. ಬಂದೋಬಸ್ತ್‌ಗೆ ತೆರಳಿದರೆ ರಜೆಯೂ ಸಿಗುವುದಿಲ್ಲ' ಎಂದು ಅಳಲು ತೋಡಿಕೊಂಡಿದ್ದಾರೆ.

'ಬೇರೆ ವಲಯಗಳಿಗೆ ವರ್ಗಾವಣೆಯಾದರೆ ಸೇವಾವಧಿ ಕಡಿತವಾಗಲಿದೆ. ಹೊಸ ನೇಮಕಾತಿ ರೀತಿಯಲ್ಲೇ ಕೆಲಸ ಮಾಡಬೇಕಿದೆ. ಅಂತರ ಜಿಲ್ಲಾ ವರ್ಗಾವಣೆ ಕೊಡದಿದ್ದರೂ ತೊಂದರೆ ಇಲ್ಲ. ಅಂತರ ಜಿಲ್ಲಾ ಬಂದೋಬಸ್ತ್‌ಗೆ ನೇಮಿಸುವುದು ಬೇಡ' ಎಂದು ಕೋರಿದ್ದಾರೆ.