ಶಿವಮೊಗ್ಗ: ಕುವೆಂಪು ವಿವಿ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ.ರಮೇಶ್ ಬಾಬು ಹೆಚ್.ಎನ್ ನೇಮಕ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಕರನ್ನಾಗಿ ಡಾ.ರಮೇಶ್ ಬಾಬು ಹೆಚ್ ಎನ್ ಅವರನ್ನು ನಿಯೋಜನೆ ಮೇಲೆ ನೇಮಕ ಮಾಡಲಾಗಿದೆ.
ಈ ಸಂಬಂಧ ಕುವೆಂಪು ವಿವಿಯ ಉಪ ಕುಲಸಚಿವರು ಆದೇಶ ಹೊರಡಿಸಿದ್ದು, ಕಡೂರು ಸ್ನಾತಕೋತ್ತರ ಕೇಂದ್ರದ ಪ್ರೊ.ಕೆ.ಎಂ ಮಹಾದೇವನ್ ಅವರನ್ನು ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿತ್ತು ಎಂದಿದ್ದಾರೆ.
ಇದೀಗ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿ, ಆ ಸ್ಥಾನಕ್ಕೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಾದಂತ ಡಾ.ರಮೇಶ್ ಬಾಬು ಹೆಚ್ ಎನ್ ಅವರನ್ನು ನಿಯೋಜನೆ ಮೇರೆಗೆ ನಿರ್ದೇಶಕರನ್ನಾಗಿ ನೇಮಿಸಿ ಆದೇಶಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕರಪತ್ರ, ಪೋಸ್ಟರ್ ಮುದ್ರಣ ಮಾಹಿತಿ ನೀಡುವುದು ಕಡ್ಡಾಯ: ಡಾ.ಸೆಲ್ವಮಣಿ
ಶಿವಮೊಗ್ಗ : ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕರಪತ್ರ, ಪೋಸ್ಟರ್, ಬ್ಯಾನರ್ ಇತ್ಯಾದಿಗಳನ್ನು ಮುದ್ರಿಸಿದ ಸಂದರ್ಭದಲ್ಲಿ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.
ಅವರು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲಿಕರ ಹಾಗೂ ಕೇಬಲ್ ಟಿವಿ ಆಪರೇಟರ್ಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ಕರಪತ್ರ, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸಿದ ಸಂದರ್ಭದಲ್ಲಿ ಅದರಲ್ಲಿ ಮುದ್ರಕರ ಹೆಸರು ಇತ್ಯಾದಿಗಳನ್ನು ಸಹ ಕಡ್ಡಾಯವಾಗಿ ಮುದ್ರಿಸಬೇಕು. ಪ್ರತಿದಿನ ಮುದ್ರಣದ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಮುದ್ರಣದ ಬಳಿಕ ಅದರ ಪ್ರತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನಿಗದಿತ ಮಾಹಿತಿಯೊಂದಿಗೆ ಸಲ್ಲಿಸಬೇಕು. ರಾಜಕೀಯ ಪ್ರೇರಿತ ಯಾವುದೇ ಮುದ್ರಣ ಕಾರ್ಯವನ್ನು ಕೈಗೊಳ್ಳುವ ಸಂದರ್ಭದಲ್ಲಿ ನಿಗದಿತ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ (1951) 127 (ಎ) ಅಡಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮುದ್ರಣದ ಮಾಹಿತಿಯನ್ನು ನಮೂನೆ ಎ ಮತ್ತು ಬಿ ಯಲ್ಲಿ ನಮೂದಿಸಬೇಕು. ಇದರಲ್ಲಿ ಮುದ್ರಕರ ಹೆಸರು, ಅಭ್ಯರ್ಥಿ ವಿವರ, ವೆಚ್ಚ, ವಿಳಾಸ, ಪ್ರತಿಗಳ ಸಂಖ್ಯೆ ಇತ್ಯಾದಿ ವಿವರಗಳು ಇರಬೇಕು. ಸಮರ್ಪಕ ಮಾಹಿತಿ ಲಭ್ಯವಿಲ್ಲದಿದ್ದರೆ ಮುದ್ರಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಚುನಾವಣೆ ಬಹಿಷ್ಕಾರದಂತಹ ಪೋಸ್ಟರ್, ಕರಪತ್ರ, ಬ್ಯಾನರ್ಗಳನ್ನು ಮುದ್ರಿಸುವುದು ಎಂದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಕೇಬಲ್ ಚಾನೆಲ್ಗಳಿಗೆ ಸೂಚನೆ: ಸ್ಥಳೀಯ ಕೇಬಲ್ ಚಾನೆಲ್ಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಪ್ರಸಾರ ಮಾಡುವ ಪೂರ್ವದಲ್ಲಿ ಅನುಮತಿಯನ್ನು ನಿಗದಿತ ಪ್ರಾಧಿಕಾರದಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಸಿನೆಮಾ ಥಿಯೇಟರ್, ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಎಲ್ಲಾ ಎಲೆಕ್ಟಾçನಿಕ್ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಸಾರ ಮಾಡುವ ಪೂರ್ವದಲ್ಲಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದಾರ್, ಜಿಲ್ಲಾ ಪ್ರಿಂಟಿಂಗ್ ಪ್ರೆಸ್ ಸಂಘದ ಪ್ರತಿನಿಧಿಗಳು, ಮತ್ತಿತರರು ಉಪಸ್ಥಿತರಿದ್ದರು.