ಶಾಸಕ ಸ್ಥಾನಕ್ಕೆ ಜೆಡಿಎಸ್ನ ಎ. ಟಿ. ರಾಮಸ್ವಾಮಿ ರಾಜೀನಾಮೆ
ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಶುಕ್ರವಾರ ಹಾಸನ ಜಿಲ್ಲೆಯ ಜೆಡಿಎಸ್ ನಾಯಕ, ಅರಕಲಗೂಡು ಕ್ಷೇತ್ರದ ಶಾಸಕ ಎ. ಟಿ. ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದು, ಬಳಿಕ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ತೆರಳಿದರು. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿತ್ತು. ಅಂತಿಮವಾಗಿ ಇಂದು ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
2018ರ ಚುನಾವಣೆಯಲ್ಲಿ ಎ. ಟಿ. ರಾಮಸ್ವಾಮಿ 85,064 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 74,411 ಮತಗಳನ್ನು ಪಡೆದ ಕಾಂಗ್ರೆಸ್ನ ಎ. ಮಂಜು ಸೋಲಿಸಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಚಿತ್ರಣವೇ ಬದಲಾಗಿದೆ, ಎ. ಮಂಜು ಜೆಡಿಎಸ್ ಸೇರಿದ್ದಾರೆ. ಅರಕಲಗೂಡು ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಅವರೇ ಜೆಡಿಎಸ್ ಅಭ್ಯರ್ಥಿ. ಕ್ಷೇತ್ರದ ಹಾಲಿ ಶಾಸಕ ಎ. ಟಿ. ರಾಮಸ್ವಾಮಿ ಕಾಂಗ್ರೆಸ್ ಸೇರಲಿದ್ದು, ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆ ಇದೆ.
ಅರಕಲಗೂಡು ಕ್ಷೇತ್ರದಲ್ಲಿ ಎ. ಟಿ. ರಾಮಸ್ವಾಮಿಯನ್ನು ಬಿಟ್ಟು ಎ. ಮಂಜು ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಡೆದಿತ್ತು. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಅರಕಲಗೂಡು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಎ. ಟಿ. ರಾಮಸ್ವಾಮಿ, "ಶಾಸಕನಾಗಿ ಕೆಲಸ ಮಾಡಲು ಅವಕಾಶ ನೀಡಿದ ಜೆಡಿಎಸ್ಗೆ ಧನ್ಯವಾದ ಹೇಳುತ್ತೇನೆ. ನಾನು ವೈಯಕ್ತಿಕ, ಸ್ವ ಹಿತಾಸಕ್ತಿಗಾಗಿ ರಾಜಕೀಯ ಮಾಡಿಲ್ಲ. ಜನರಪರ ರಾಜಕೀಯ ಮಾಡಿದ್ದೇನೆ. ಸರಿ ಇದ್ದದ್ದು ಸರಿ ಎಂದು ಹೇಳಿದ್ದೇನೆ. ತಪ್ಪಿದ್ದರೆ ತಪ್ಪು ಎಂದು ಹೇಳಿದ್ದೇನೆ" ಎಂದರು.
ಅರಕಲಗೂಡು ರಾಜಕೀಯ ಹಾಸನದ ರಾಜಕೀಯ ಎಂದರೆ ನೆನಪಾಗುವುದು ಎಚ್. ಡಿ. ದೇವೇಗೌಡ ಮತ್ತು ಜಿ. ಪುಟ್ಟಸ್ವಾಮಿ ಗೌಡ. 1999ರಲ್ಲಿ ಅರಕಲಗೂಡು ಕ್ಷೇತ್ರದಲ್ಲಿಯ ಎ. ಮಂಜು ಗೆದ್ದು ಶಾಸಕರಾದರು. ಕಾಂಗ್ರೆಸ್ನ ಎ. ಟಿ. ರಾಮಸ್ವಾಮಿ ಸೋತರು. ಪುಟ್ಟಸ್ವಾಮಿ ಗೌಡರು ಎ. ಮಂಜುವನ್ನು ಕಾಂಗ್ರೆಸ್ಗೆ ಕರೆತಂದು ಬಲ ಹೆಚ್ಚಿಸಿಕೊಂಡರು. ಸೋಲು ಕಂಡಿದ್ದ ಎ. ಟಿ. ರಾಮಸ್ವಾಮಿ ದೇವೇಗೌಡರ ಜೆಡಿಎಸ್ ಸೇರಿದರು. 2004ರ ಚುನಾವಣೆಯಲ್ಲಿ ರಾಮಸ್ವಾಮಿ ಅಕರಲಗೂಡು ಕ್ಷೇತ್ರದಲ್ಲಿ ಗೆದ್ದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಬೆಂಗಳೂರು ಸುತ್ತಮುತ್ತ ಸರ್ಕಾರಿ ಭೂಮಿ ಒತ್ತುವರಿ ಪತ್ತೆ ಹಚ್ಚಲು ಎ. ಟಿ. ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ನೇರ, ನಿಷ್ಠುರತೆಯಿಂದ ತನಿಖೆ ನಡೆಸಿದ ಸಮಿತಿ ಸುಮಾರು 40 ಸಾವಿರ ಕೋಟಿ ರೂ.ಗಳ 27 ಸಾವಿರ ರೂ. ಕಂದಾಯ, ಅರಣ್ಯ, ಪಶು ಸಂಗೋಪನೆ ಇಲಾಖೆ ಸೇರಿದಂತೆ ಬಿಡಿಎ, ಬಿಬಿಎಂಪಿಯ ಭೂಮಿಯೂ ಒತ್ತುವರಿ ಆಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು.
ಮಂಗಳವಾರ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗುರುವಾರ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಕೆಲವು ದಿನಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಜೆಡಿಎಸ್ ತೊರೆದ ಹಲವು ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಬಿಟ್ಟು ಬಂದ ಹಲವು ನಾಯಕರಿಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದೆ.
ಇದುವರೆಗೂ ಜೆಡಿಎಸ್ ತೊರೆದ ನಾಯಕರು ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ. ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡ, ತುಮಕೂರು ಜಿಲ್ಲೆಯ ನಾಯಕ ಬೆಮಲ್ ಕಾಂತರಾಜ್, ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್, ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ.