ವಿಜಯೇಂದ್ರರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ

ವಿಜಯೇಂದ್ರರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ

ಶಿರಾಳಕೊಪ್ಪ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು.

'ಜೀವನದ ಕೊನೆ ಉಸಿರು ಇರುವವರೆಗೂ ಜನರ ಸೇವೆ ಮಾಡುತ್ತೇನೆ. ನಿಮ್ಮ ಆಶೀರ್ವಾದದಿಂದ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಶಿಕಾರಿಪುರ ತಾಲ್ಲೂಕಿನ ಜನರನ್ನು ಮರೆಯಲು ಸಾದ್ಯವಿಲ್ಲ' ಎಂದರು.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಈ ದಿನದ ವಿಜಯ ಸಂಕಲ್ಪ ಯಾತ್ರೆಗೆ ಸೇರಿರುವ ಜನಸ್ತೋಮ ನೋಡಿದರೇ,ಇದು ವಿಜಯೋತ್ಸವದಂತೆ ಭಾಸವಾಗುತ್ತಿದೆ. ಕಾಂಗ್ರೆಸ್ ನವರ ಎದೆ ಒಡೆದುಹೋಗಿದೆ.ಈ ಉತ್ಸಾಹ ಚುನಾವಣೆ ಮುಗಿಯುವವರೆಗೂ ಹೀಗೇ ಇರಲಿ. ಯಡಿಯೂರಪ್ಪ ಅಭಿವೃದ್ದಿ ಪರ ಕೆಲಸಗಳನ್ನು ಮನೆ ಮನೆಗೂ ತಲುಪಿಸಿದರೆ ಸಾಕು ಓಟುಗಳು ಬರುವುದರಲ್ಲಿ ಸಂಶಯವಿಲ್ಲ ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಮಲೆನಾಡು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿದರು. ಯಾತ್ರೆಯು ಪಟ್ಟಣದ ಸೊರಬ ರಸ್ತೆಯ ಮುಖಾಂತರ ಬಸ್ ನಿಲ್ದಾಣದ ವೃತ್ತಕ್ಕೆ ಆಗಮಿಸಿ ಸಭೆ ನಡೆಸಲಾಯಿತು. ಅಭಿಮಾನಿಗಳು ಮತ್ತು ಕಾರ್ಯಕರ್ತರು ಕ್ರೇನ್‌ ಮತ್ತು ಜೆಸಿಬಿ ಮೂಲಕ ಹೂ ಮಳೆ ಗರೆದರು. ಬೃಹತ್‌ ಗಾತ್ರದ ಗುಲಾಬಿ ಹಾರವನ್ನು ಹಾಕಲಾಯಿತು.

ಬಿ.ವೈ. ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರ ಅವರನ್ನು ಕಾರ್ಯಕರ್ತರು ಎತ್ತಿಕೊಂಡು ಕುಣಿದು ಕುಪ್ಪಳಿಸಿದರು.

ಉಡುಗಣಿ ಗ್ರಾಮದ ಜಾನಪದ ಡೊಳ್ಳು ಯಾತ್ರೆಯ ಮೆರಗು ಹೆಚ್ಚಿಸಿತ್ತು. ಡಿಜೆ ಹಾಡುಗಳಿಗೆ ಪುರಸಭೆ ಅಧ್ಯಕ್ಷ್ಯ ಮಂಜುಳಾ ರಾಜು, ಸದಸ್ಯ ಮಹಾಬಲೇಶ್, ಲಲಿತಮ್ಮ ಸೇರಿ ನೂರಾರು ಮಹಿಳೆಯರು ಕುಣಿದು ಕುಪ್ಪಳಿಸಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ. ರೇವಣಪ್ಪ, ಭೋವಿ ನಿಗಮದ ಅಧ್ಯಕ್ಷ ಸಣ್ಣ ಹನುಮಂತಪ್ಪ, ಮಡಿವಾಳ ಮಾಚಿದೇವ ನಿಗಮದ ಅಧ್ಯಕ್ಷ ರಾಜು ತಲ್ಲೂರು, ರಥ ಯಾತ್ರೆಯ ರಾಜ್ಯ ಸಂಚಾಲಕ ರಾಜಪ್ಪ, ಸಹ ಸಂಚಾಲಕ ದತ್ತಾತ್ರೆಯ, ಕೆ.ಎಸ್.ಡಿ.ಎಲ್ ನಿರ್ದೇಶಕಿ ನಿವೇದಿತಾ ರಾಜು, ಸವಿತಾ ಶಿವಕುಮಾರ್, ಟೌನ್ ಅಧ್ಯಕ್ಷ ಮಂಚಿ ಶಿವಣ್ಣ, ಟಿ. ರಾಜು, ತಡಗಣಿ ಮಂಜುನಾಥ್, ಪವನ್ ಕಲಾಲ್, ರವಿ ಶಾನುಬೋಗ್, ರಟ್ಟಿಹಳ್ಳಿ ಲೋಕೇಶ್, ಎಚ್.ಎಂ. ಚಂದ್ರಶೇಖರ್ ಸೇರಿ ಪ್ರಮುಖರು ಭಾಗವಹಿಸಿದ್ದರು.