ವಿಜಯಪುರ | ₹ 4.10 ಕೋಟಿ ಕಾಮಗಾರಿಗೆ ಚಾಲನೆ: ನಿಸರ್ಗ ನಾರಾಯಣಸ್ವಾಮಿ

ವಿಜಯಪುರ | ₹ 4.10 ಕೋಟಿ ಕಾಮಗಾರಿಗೆ ಚಾಲನೆ: ನಿಸರ್ಗ ನಾರಾಯಣಸ್ವಾಮಿ

ವಿಜಯಪುರ (ದೇವನ ಹಳ್ಳಿ): ಪಟ್ಟಣದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು.

2018-19ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿ ₹ 2.45 ಕೋಟಿ ವೆಚ್ಚದ 25 ಕಾಮಗಾರಿ, 2019-20 ಮತ್ತು 2021-22‌ನೇ ಸಾಲಿನ ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಯ ₹ 9.80 ಲಕ್ಷದ ಕಾಮಗಾರಿ, 15ನೇ ಹಣಕಾಸು ಯೋಜನೆ ಮತ್ತು ಪುರಸಭಾ ನಿಧಿಯಡಿ ₹ 1.57 ಕೋಟಿ ವೆಚ್ಚದ 15 ಕಾಮಗಾರಿ, 2022-23ನೇ ಸಾಲಿನ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ₹ 1 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಅವರು, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ₹ 4.10 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಕೋವಿಡ್ ಕಾರಣದಿಂದ ನಮ್ಮ ಕ್ಷೇತ್ರಕ್ಕೆ ಅನುಮೋದನೆಗೊಂಡಿದ್ದ ಅನುದಾನವನ್ನು ಸರ್ಕಾರ ತಡೆ ಹಿಡಿದಿತ್ತು. ನಿರಂತರವಾಗಿ ಒತ್ತಡ ಹೇರಿದ ಪರಿಣಾಮ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಕೂಡ ಗಮನಹರಿಸಬೇಕಾಗಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ಲೋಪದೋಷ ಕಂಡುಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುತ್ತದೆ ಎಂದರು.

ವಾರ್ಡ್‌ನಲ್ಲಿರುವ ನಾಗರಿಕರು ಕೂಡ ಕಾಮಗಾರಿಗಳ ಬಗ್ಗೆ ನಿಗಾವಹಿಸಬೇಕು. ಆಗಷ್ಟೇ ಗುಣಮಟ್ಟದ ಕಾಮಗಾರಿಗಳನ್ನು ಮಾಡುತ್ತಾರೆ ಎಂದು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ಉಪಾಧ್ಯಕ್ಷ ಎಂ. ಕೇಶವಪ್ಪ, ಮುಖ್ಯಾಧಿಕಾರಿ ವಿ. ಮೋಹನ್ ಕುಮಾರ್, ಸದಸ್ಯರಾದ ಸಿ. ನಾರಾಯಣಸ್ವಾಮಿ, ರವಿ, ಎಕ್ಭಾಲ್, ವಿಮಲಾ ಬಸವರಾಜ್, ಸುಷ್ಮಾ ಮಹೇಶ್, ಕವಿತಾ, ಶ್ರೀರಾಮ್, ಭೈರೇಗೌಡ, ಸಿ.ಎಂ. ರಾಮು, ಶಿಲ್ಪಾ ಅಜಿತ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಟೌನ್ ಅಧ್ಯಕ್ಷ ಎಸ್. ಭಾಸ್ಕರ್, ಮಾಜಿ ಅಧ್ಯಕ್ಷ ಎನ್. ನಾರಾಯಣಸ್ವಾಮಿ, ಮುಖಂಡರಾದ ಮಹಬೂಬ್ ಪಾಷ, ಎಸ್.ಆರ್. ಬಸವರಾಜ್, ಎಂ.ಡಿ. ರಾಮಚಂದ್ರಪ್ಪ, ಚಿ.ಮಾ. ಸುಧಾಕರ್, ಜೆ.ಆರ್. ಮುನಿವೀರಣ್ಣ ಹಾಜರಿದ್ದರು.

ದೊರೆಯದ ಚಾಲನೆ: ಕಾಂಗ್ರೆಸ್‌ನ 7 ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರ ವಾರ್ಡ್‌ಗಳಲ್ಲಿ ಶಾಸಕರಿಂದ ಕಾಮಗಾರಿಗೆ ಚಾಲನೆ ನೀಡಲು ಸದಸ್ಯರು ಸಹಕಾರ ನೀಡಲಿಲ್ಲ. ಹಾಗಾಗಿ, ಈ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿಲ್ಲ.