ಯುವ ದಸರಾದಲ್ಲಿ ಅಪ್ಪು ನಮನ: ಪುನೀತ್ ನೋಡಿ ಕಣ್ಣೀರಿಟ್ಟ ಅಶ್ವಿನಿ

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಯುವ ದಸರಾ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ದೀಪ ಬೆಳಗಿಸುವ ಮೂಲಕ ಅಶ್ವಿನಿ ಪುನೀತ್ ರಾಜ್‍ಕುಮಾರ್ ಯುವ ದಸರಾ ಉದ್ಘಾಟಿಸಿದ್ದಾರೆ. ಮೊದಲ ದಿನ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಕಾರ್ಯಕ್ರಮವನ್ನು ಮೀಸಲಿಡಲಾಗಿದ್ದು, ಅಪ್ಪು ನಮನ ಹೆಸರಿನಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜನೆ ಮಾಡಿದೆ.
ಯುವ ದಸರಾಗೆ ವಿದ್ಯುಕ್ತ ಚಾಲನೆ ದೊರೆಯುತ್ತಿದ್ದಂತೆ ಅಭಿಮಾನಿಗಳು ಅಪ್ಪು ಅಪ್ಪು ಎಂದು ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಕೂಗಾಡಿದರು. ಜೊತೆಗೆ ಮೊಬೈಲ್ ಲೈಟ್ ಆನ್ ಮಾಡಿ ಪುನೀತ್ ರಾಜ್ ಕುಮಾರ್ ಗೆ ಗೌರವ ನೀಡಿದರು. ಈ ವೇಳೆ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ಹಾಗೂ ರಾಜ್ ಕುಟುಂಬ ಸದಸ್ಯರಾದ ರಾಘವೇಂದ್ರ ರಾಜ್‌ಕುಮಾರ್, ವಿನಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು. ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಟೀಸರ್ ನೋಡಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕಿದರು.
ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ಹವಾ ಜೋರಾಗಿದೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಎರಡು ಭಾರಿ ಗಂಧದ ಗುಡಿ ಟೀಸರ್ ಪ್ರಸಾರ ಮಾಡಲಾಯಿತು. ಈ ವೇಳೆ ಪುನೀತ್ ಅವರನ್ನು ತೆರೆ ಮೇಲೆ ನೋಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದರು.
ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಟ ರಾಘವೇಂದ್ರ ರಾಜ್ ಕುಮಾರ್, ಎಲ್ಲಾ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ, ಎಲ್ಲರೂ ಅಪ್ಪು ಪ್ರೀತಿಸುತ್ತಿದ್ದರು, ಈಗ ಪೂಜಿಸುತ್ತಿದ್ದೀರಾ. ನಿಮ್ಮೆಲ್ಲರಲ್ಲೂ ಅಪ್ಪುವನ್ನು ಕಾಣುತ್ತಿದ್ದೇನೆ. ನಾನು ಇಲ್ಲೇ ಇದ್ದು ಒಂದು ಹಾಡು ಕೂಡ ಹಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಜೊತೆಗೆ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು ಹಾಡಿ ಭಾವುಕರಾದರು.