ಬೇಡಿಕೆ ಈಡೇರಿಕೆಗೆ ಸಿಎಂ ಭರವಸೆ : ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ ವಾಪಾಸ್

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದರು. ಹೆಚ್ಚಳಕ್ಕೆ ಹಾಗೂ 60 ವರ್ಷದವರೆಗೂ ಸೇವಾ ಭದ್ರತೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿ ವಾಪಸ್ ಪಡೆಯಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಹೆಚ್. ಯಮೋಜಿ, ಭಾರತೀಯ ಮಜ್ದೂರ್ ಸಂಘ ಹಾಗೂ KSHCOEA ರಾಜ್ಯ ಸಮಿತಿಯು ನಿಯೋಗವು ದಿನಾಂಕ 09.02.2023 ರಾತ್ರಿ 8.30ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಸಭೆ ಮಾಡಲಾಯಿತು ಎಂದಿದ್ದಾರೆ.
ಈ ಸಭೆಯಲ್ಲಿ ಫೆಬ್ರವರಿ 06 ರ ಪ್ರತಿಭಟನೆಯಲ್ಲಿ ನೀಡಿದ ಮನವಿಯ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಯಿತು. ಮುಖ್ಯಮಂತ್ರಿಗಳು ವಿಶೇಷವಾಗಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವುದಾಗಿ ನಿಶ್ಚಿತವಾದ ಭರವಸೆಯನ್ನು ನೀಡಿರುತ್ತಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಖಾಯಂಯಾತಿ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನದ ಬಗ್ಗೆ ಪ್ರಸ್ತಾಪಿಸಲಾಯಿತು ಎಂದು ತಿಳಿಸಿದ್ದಾರೆ.
ಈ ಪ್ರಮುಖ ಎರಡು ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಪ್ರಥಮ ಆದ್ಯತೆಯಾಗಿ ವೇತನ ಹೆಚ್ಚಳವನ್ನು ಶ್ರೀನಿವಾಸಚಾರಿ ವರದಿ ಆಧಾರದ ಮೇಲೆ ಆದೇಶ ನೀಡಿ ನಂತರ ಹಂತ ಹಂತವಾಗಿ ಸಮಾನ ವೇತನ ಹೆಚ್ಚಳ ಮಾಡಿ ಕೊಡುವುದಾಗಿ ಭರವಸೆ ನೀಡಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಎರಡನೆಯದಾಗಿ ಖಾಯಂಯಾತಿ ಬಗ್ಗೆ ಪ್ರಸ್ತಾಪಿಸಿದಾಗ ಮುಖ್ಯ ಮಂತ್ರಿಗಳು ಸಧ್ಯಕ್ಕೆ ಇದು ಅಸಾಧ್ಯ ಎಂದು ತಿಳಿಸಿದಾಗ, ಇದಕ್ಕೆ ಒಪ್ಪದ ಸಂಘಟನೆ ಕೊನೆ ಪಕ್ಷ ಅಸ್ಸಾಂ ಮಾದರಿ ಇತರೇ ಯಾವುದೇ ಮಾದರಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಗಳ ವಿವೇಚನೆಯಲ್ಲಿ 60 ವರ್ಷದ ವರೆಗೆ ಸೇವಾ ಭದ್ರತೆ ನೀಡಲು ಕೋರಿದಾಗ ಇದಕ್ಕೆ ಸಹಮತ ಸೂಚಿಸಿ ಸ್ಪಷ್ಟ ಭರವಸೆ ನೀಡಿರುತ್ತಾರೆ ಎಂದು ಹೇಳಿದ್ದಾರೆ.
ಸಚಿವರು ಹಾಗೂ ಅಧಿಕಾರಿಗಳ ಮಟ್ಟದಲ್ಲಿ ವಿಮೆ, ವರ್ಗಾವಣೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಯ ಆದೇಶಗಳನ್ನು ಕೂಡಲೇ ಹೊರಡಿಸುವ ವಿಶ್ವಾಸದ ಮೇರೆಗೆ ಮುಷ್ಕರ ಹಿಂದಕ್ಕೆ ಪಡೆಯುವ ಬಗ್ಗೆ ದಿನಾಂಕ 10.09.2023ರಂದು ಎಲ್ಲರ ಸಮ್ಮುಖದಲ್ಲಿ ಅಧಿಕೃತವಾಗಿ ನಿರ್ಣಯಿಸಿ ಮುಷ್ಕರ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ