ಬೆಂಗಳೂರಿನಲ್ಲಿ 13 ರೌಡಿಗಳು ಗಡಿಪಾರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರಿನಲ್ಲಿ 13 ರೌಡಿಗಳು ಗಡಿಪಾರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರು, ಜ.4: ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ತೊಡುತ್ತಿದ್ದ 13 ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

2022ನೆ ಸಾಲಿನಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ಕಾರ್ಯಾಚರಣೆ ಕುರಿತು ಬುಧವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿವಿಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದ್ದು, 2022ನೆ ಸಾಲಿನಲ್ಲಿ 22 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. 40 ರೌಡಿಗಳ ವಿರುದ್ಧ ಬಾಂಡ್‍ಗಳ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, 13 ಮಂದಿಯನ್ನು ಗಡಿ ಪಾರು ಮಾಡಲಾಗಿದೆ. ಭದ್ರತಾ ಕಾಯ್ದೆಯಡಿ ಒಟ್ಟು 3100 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಷರತ್ತು ಉಲ್ಲಂಘನೆ ಮಾಡಿದ 34 ರೌಡಿಗಳನ್ನು ಕಾರಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕುರಿತು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಕಳೆದ ಸಾಲಿನಲ್ಲಿ 421 ಜೂಜು, 201 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಭೇದಿಸಲಾಗಿದೆ ಎಂದ ಅವರು,ನಗರದಲ್ಲಿ ಒಟ್ಟಾರೆಯಾಗಿ 16 ಕೊಲೆ ಪ್ರಕರಣಗಳು, 10 ಕೊಲೆಯತ್ನ, 2 ವಂಚನೆ, 2 ಮಾದಕ ವಸ್ತು, 6 ಅತ್ಯಾಚಾರ ಪ್ರಕರಣ ಹಾಗೂ ದೌರ್ಜನ್ಯ ಪ್ರಕರಣಗಳು 31 ಪೆÇೀಕ್ಸೋ ಪ್ರಕರಣಗಳು ಹಾಗೂ ಇತರೆ 8 ಕಳವು ಪ್ರಕರಣಗಳಲ್ಲಿ ಆರೋಪಿಗಳಿಗೆ ಸಜೆಯಾಗಿದೆ ಎಂದರು.

ನಗರದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಕಾಮಾಕ್ಷಿಪಾಳ್ಯ ಆಯಸಿಡ್ ದಾಳಿ ಪ್ರಕರಣ, ಮೂರು ವರ್ಷಗಳಿಂದ ಸತತವಾಗಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಸಂತೋಷ್ ಎಂಬಾತನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪತ್ತೆ ಮಾಡಿ 51 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅದೇ ರೀತಿ, ಬನಶಂಕರಿ ಪೊಲೀಸರು ನಕಲಿ ಪಾಸ್‍ಪೋರ್ಟ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.