ಪ್ರವಾಸ ಹೋದವರು ಮರಳಿ ಬರಲೇ ಇಲ್ಲ

ಪ್ರವಾಸ ಹೋದವರು ಮರಳಿ ಬರಲೇ ಇಲ್ಲ

ಕಾಠ್ಮಂಡು: ನೇಪಾಲ ವಿಮಾನ ದುರಂತದಲ್ಲಿ ಮಡಿದ ಐವರು ಭಾರತೀಯರ ಪೈಕಿ ನಾಲ್ವರು ಪೋಖಾರದ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದರು. ಆದರೆ ತಾವು ಪ್ರಯಾಣಿಸುತ್ತಿದ್ದ ವಿಮಾನ ಪೋಖಾರ ವಿಮಾನ ನಿಲ್ದಾಣದಲ್ಲಿ ಇಳಿಯಲು ಕೇವಲ 5 ನಿಮಿಷಗಳು ಬಾಕಿಯಿರುವಾಗಲೇ ದುರಂತ ಸಂಭವಿಸಿತ್ತು.

ವಿಮಾನವು ಕಣಿವೆಯೊಂದಕ್ಕೆ ಬಿದ್ದು ಪತನಗೊಂಡು ಹೊತ್ತಿಕೊಂಡ ಬೆಂಕಿಯಲ್ಲಿ ಬಹುತೇಕ ಮಂದಿ ಸುಟ್ಟು ಭಸ್ಮವಾದರು!

ದುರಂತದಲ್ಲಿ ಮೃತಪಟ್ಟ ಭಾರತೀಯ ಪ್ರಜೆಗಳನ್ನು ಉತ್ತರ ಪ್ರದೇಶದವರಾದ ಅಭಿಷೇಕ್‌ ಖುಶ್ವಾಹ, ಬಿಶಾಲ್‌ ಶರ್ಮಾ, ಅನಿಲ್‌ ಕುಮಾರ್‌ ರಾಜ್‌ಭರ್‌, ಸೋನು ಜೈಸ್ವಾಲ್‌ ಮತ್ತು ಸಂಜಯ ಜೈಸ್ವಾಲ್‌ ಎಂದು ಗುರುತಿಸಲಾಗಿದೆ.

“ನಾವೆಲ್ಲವೂ ಭಾರತದಿಂದ ಒಂದೇ ವಾಹನದಲ್ಲಿ ಬಂದಿದ್ದೆವು. ಅವರು ನಾಲ್ವರು ಪಶುಪತಿನಾಥ ದೇಗುಲದ ಸಮೀಪದ ಗೋಶಾಲೆಗೆ ಹೋಗಿ ಅನಂತರ ಹೊಟೇಲ್‌ನಲ್ಲಿ ತಂಗಿದ್ದರು. ಅಲ್ಲಿಂದ ಅವರು ಪ್ಯಾರಾಗ್ಲೈಡಿಂಗ್ ಗೆಂದು ಪೋಖಾರಕ್ಕೆ ತೆರಳಲು ವಿಮಾನವೇರಿದ್ದರು. ಪ್ಯಾರಾಗ್ಲೈಡಿಂಗ್ ಮುಗಿಸಿ ಗೋರಖ್‌ಪುರದ ಮೂಲಕ ಭಾರತಕ್ಕೆ ವಾಪಸ್‌ ಹೋಗುವವರಿದ್ದರು’ ಎಂದು ದಕ್ಷಿಣ ನೇಪಾಲದ ನಿವಾಸಿ ಸರ್ಲಾಹಿ ತಿಳಿಸಿದ್ದಾರೆ.

ಇದೇ ವೇಳೆ ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಸುನೀಗಿದವರ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ.

ಘಟನೆ ಬಗ್ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ.

ಎಲ್ಲ ವಿಮಾನಗಳ ತಪಾಸಣೆಗೆ ನಿರ್ಧಾರ: ಪ್ರಯಾಣಿಕ ವಿಮಾನ ದುರಂತದ ಬೆನ್ನಲ್ಲೇ ನೇಪಾಲ ಸರಕಾರವು ಎಲ್ಲ ದೇಶೀಯ ವಿಮಾನಗಳ ತಾಂತ್ರಿಕ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಯೇಟಿ ಏರ್‌ಲೈನ್ಸ್‌ನ ವಿಮಾನ ಪತನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲುವಟಾರ್‌ನಲ್ಲಿ ಸಂಪುಟ ಸಭೆ ನಡೆಸಲಾಗಿದೆ. ಘಟನೆಯ ತನಿಖೆಗಾಗಿ ವಿಮಾನಯಾನದ ಮಾಜಿ ಕಾರ್ಯದರ್ಶಿ ನಾಗೇಂದ್ರ ಮಿರೆ ನೇತೃತ್ವದ ಐವರು ಸದಸ್ಯರ ಸಮಿತಿ ರಚಿಸಲಾಗಿದೆ.

ಪತನಕ್ಕೂ ಮುನ್ನ ಓಲಾಡಿದ್ದ ವಿಮಾನ!
ವಿಮಾನವು ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಆಗಸದಲ್ಲಿ ಓಲಾಡುತ್ತಿದ್ದ ವೀಡಿಯೋವೊಂದು ವೈರಲ್‌ ಆಗಿದೆ. ವಿಮಾನವು ಏಕಾಏಕಿ ನೆಲಕ್ಕೆ ಹತ್ತಿರ ಬಂದು, ಮತ್ತೆ ಮೇಲೇರಿ ಅಪಾಯಕಾರಿಯಾಗಿ ಓಲಾಡುತ್ತಾ ಸಾಗುತ್ತದೆ. ಇದಾದ ಕೆಲವು ಸೆಕೆಂಡುಗಳಲ್ಲೇ ಭಾರೀ ಶಬ್ದದೊಂದಿಗೆ ಅದು ಪತನಗೊಳ್ಳುತ್ತದೆ. ಈ ವೀಡಿಯೋವನ್ನು ವ್ಯಕ್ತಿಯೊಬ್ಬರು ಮೊಬೈಲ್‌ ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ.