ಪಿಎಂ ಕಿಸಾನ್ 13ನೇ ಕಂತು ಬಿಡುಗಡೆ ; ದೇಶದ 8 ಕೋಟಿ ರೈತರ ಖಾತೆಗೆ ₹2000 ಜಮೆ

ಬೆಳಗಾವಿ : ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ರು. ಇನ್ನು ಇದೇ ವೇಳೆ ಪಿಎಂ ಕಿಸಾನ್ ಯೋಜನೆಯ((PM Kisan Samman Nidhi Scheme) 13ನೇ ಕಂತಿನ ಹಣವನ್ನ ಬಿಡುಗಡೆ ಮಾಡಿದರು.
ಪಿಎಂ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ 49 ಲಕ್ಷ ಸೇರಿ ದೇಶದ 8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 16,800 ಕೋಟಿ ರೂಪಾಯಿಗಳನ್ನ ಜಮಾ ಮಾಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸೇರಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಭಾಗಿಯಾಗಿದ್ದಾರೆ.
ಅಂದ್ಹಾಗೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಶೇಕಡಾ 100ರಷ್ಟು ಹಣಕಾಸು ಅನುದಾನವನ್ನ ಭಾರತ ಸರ್ಕಾರವೇ ಭರಿಸುತ್ತದೆ. 2018ರ ಡಿಸೆಂಬರ್ 1ರಂದು ಈ ಯೋಜನೆಯನ್ನ ಆರಂಭಿಸಲಾಗಿದ್ದು, ಈ ಯೋಜನೆಯಡಿ 2 ಹೆಕ್ಟೇರ್ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರ ವರ್ಗಾವಣೆ ಮಾಡುತ್ತದೆ.