ನ್ಯಾಯ ಕೊಡಿಸುವ ಪೊಲೀಸರಿಗೇ ಟೋಪಿ ಹಾಕಿದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿ!

ನ್ಯಾಯ ಕೊಡಿಸುವ ಪೊಲೀಸರಿಗೇ ಟೋಪಿ ಹಾಕಿದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿ!

ಮಂಡ್ಯ: ಇದೀಗ ನ್ಯಾಯ ಕೊಡಿಸುವ ಪೊಲೀಸರಿಗೆ ಅನ್ಯಾಯವಾಗಿದ್ದು ನ್ಯಾಯಕ್ಕಾಗಿ ಈಗ ನಿವೃತ್ತ ಪೊಲೀಸರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಇದೀಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮರಾವತಿ ಚಂದ್ರಶೇಖರ್, ವಂಚನೆ ಆರೋಪ ಹೊತ್ತುಕೊಂಡಿದ್ದಾರೆ.

ನಿವೃತ್ತ ಪೊಲೀಸರು ಹಾಗೂ ಕುಟುಂಬಸ್ಥರು ಈಗ ಟಿಕೆಟ್​ ಆಕಾಂಕ್ಷಿ ಚಂದ್ರಶೇಖರ ಮಾಲೀಕತ್ವದ ಸ್ಟಾರ್ ಹೋಟೇಲ್ ಮುಂದೆ ಧರಣಿ ಕುಳಿತಿದ್ದಾರೆ. ಮಂಡ್ಯದ ಹೊರಹೊಲಯದಲ್ಲಿರುವ ಅಮರಾವತಿ ಹೋಟೇಲ್ ಮುಂದೆ ಪ್ರತಿಭಟನೆ ನಡೆಯುತ್ತಿದ್ದು ನ್ಯಾಯಯುತವಾಗಿ ಕೊಡಬೇಕಿದ್ದ ಸೈಟ್ ಕೇಳಿದ್ರೆ ಚಂದ್ರಶೇಖರ್ ದರ್ಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

ಇದೇ ತಿಂಗಳ 5 ರಂದು ನಿವೇಶಕ್ಕಾಗಿ‌ ಚಂದ್ರಶೇಖರನನ್ನು ಪೊಲೀಸರು ಘೆರಾವ್ ಹಾಕಿದ್ದರು. ಅಂದು ಚಂದ್ರಶೇಖರ್ ಜೆಸಿಬಿ ತರಿಸಿ ಸೈಟ್ ಅಭಿವೃದ್ದಿಪಡಿಸುವ ನಾಟಕ ಆಡಿದ್ದ ಎನ್ನಲಾಗಿದೆ. ಕೆಲಸ ಮುಂದುವರೆಯದ ಕಾರಣ ಪೊಲೀಸರು ಪ್ರತಿಭಟನೆಗಿಳಿದಿದ್ದಾರೆ. 2009ರಲ್ಲಿ ಪೊಲೀಸರಿಗೆ ನಿವೇಶನದ ಭರವಸೆ ನೀಡಿ ಅಮರಾವತಿ ಡೆವೆಲಪರ್ಸ್ ಹಣ ವಸೂಲಿ ಮಾಡಿತ್ತು.

ಅಮರಾವತಿ ಚಂದ್ರಶೇಖರ್ ಒಡೆತನದ ಅಮರಾವತಿ ಡೆವೆಲಪರ್ಸ್ ಜೊತೆ ಸೇರಿ ಮಂಡ್ಯ ನಗರದ ಹೊರಹೊಲಯದ ಬೂದನೂರು ಬಳಿ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘ 27 ಎಕರೆ ಜಮೀನು ಖರೀಸಿತ್ತು. ಚಂದ್ರಶೇಖರ್​ಗೆ ತಲಾ 4.20 ಲಕ್ಷದಂತೆ 507 ಸದಸ್ಯರಿಂದ 18.82 ಕೋಟಿ ಹಣ ಸಂದಾಯವಾಗಿದ್ದು ಲೇ ಔಟ್ ಅಭಿವೃದ್ಧಿ ಪಡಿಸಿ ಅಮರಾವತಿ ಡೆವೆಲಪರ್ಸ್ 507 ನಿವೇಶನ ಹಂಚಬೇಕಿತ್ತು.

ಆದರೆ 12 ವರ್ಷಗಳಿಂದ ಇಲ್ಲ ಸಲ್ಲದ ಕಾರಣ‌ ನೀಡಿ ಸೈಟ್ ಹಂಚಲು ಹಿಂದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೇ ಒಪ್ಪಂದ ಪ್ರಕಾರ ಸಂಘದ ಗಮನಕ್ಕೆ ತರದೇ ಜಮೀನಿನ ಮೇಲೆ 5 ಕೋಟಿ ಸಾಲ‌ ಪಡೆದು ವಂಚಿಸಿರುವ ಆರೋಪ ಕೂಡ ಚಂದ್ರಶೇಖರ್ ಎದುರಿಸುತ್ತಿದ್ದಾರೆ.‌

ಹೀಗಾಗಿ ಈಗ ಪೊಲೀಸರು, ನಿವೇಶನವನ್ನ‌ ಕೂಡಲೇ ನೀಡಿದಿದ್ದರೆ ಕುಟುಂಬಸ್ಥರು, ಸಣ್ಣ ಮಕ್ಕಳೊಂದಿಗೆ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಚಂದ್ರಶೇಖರ್​ಗೆ ಟಿಕೆಟ್ ಕೊಟ್ಟರೇ ಕಾಂಗ್ರೆಸ್ ಪಕ್ಷದ ವಿರುದ್ದ ಕ್ಯಾಂಪೇನ್ ಮಾಡುವುದಾಗಿ ನಿವೃತ್ತ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.

ಮೋಸ ಹೋಗಿರುವ ಪೊಲೀಸರು 'ರಕ್ಷಣೆ ಕೊಡುವ ನಮಗೆ ಮೋಸವಾಗಿದೆ. 12 ವರ್ಷದ‌ ಹಿಂದೆ ಸಾಲಸೋಲ ಮಾಡಿ ನಿವೇಶನಕ್ಕಾಗಿ ಹಣ ಕೊಟ್ಟಿದ್ದೇವೆ.ಪುಟ್ಟ ಮಕ್ಕಳೊಂದಿಗೆ ರಸ್ತೆಗಿಳಿಯುತ್ತೇವೆ' ಎಂದು ತಮ್ಮ ಅಳಲನ್ನು ತೋಡಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಇನ್ನನೇನು ಚುನಾವಣೆಯೂ ಹತ್ತಿರ ಬಂದಿದ್ದು ಈ ಹಿನ್ನೆಲೆಯಲ್ಲಿ ಅಮರಾವತಿ ಚಂದ್ರಶೇಖರ್ ಗೆ ಟಿಕೆಟ್ ನೀಡದಂತೆ ನಿವೃತ್ತ ಪೊಲೀಸರು ಆಗ್ರಹ ಮಾಡುತ್ತಿದ್ದಾರೆ. ಪೊಲೀಸರಿಗೆ ಅನ್ಯಾಯ ಮಾಡಿದವರು ಸಾಮಾನ್ಯ ಜನರಿಗೆ ನ್ಯಾಯಕೊಡಿಸ್ತಾನಾ? ಎಂಬ ಪ್ರಶ್ನೆಯೂ ಹಾಕಿದ ಪೊಲೀಸರು, ಟಿಕೆಟ್ ನೀಡಿದ್ರೆ ಕಾಂಗ್ರೆಸ್ ವಿರುದ್ಧ ವೋಟ್ ಮಾಡುವುದಾಗಿ ನಿವೃತ್ತ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.