ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ': 'ಹಿಂದೂ' ಹೇಳಿಕೆ ಬಗ್ಗೆ ಸತೀಶ್ ಜಾರಕಿಹೊಳಿ

ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ': 'ಹಿಂದೂ' ಹೇಳಿಕೆ ಬಗ್ಗೆ ಸತೀಶ್ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ‘ಹಿಂದೂ’ ಪದದ ಮೂಲದ ಬಗ್ಗೆ ಅವರು ಮಾಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾರಕಿಹೊಳಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ನಿಪ್ಪಾಣಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸತೀಶ್ ಅವರು ಈ ಹೇಳಿಕೆ ನೀಡಿದ್ದರು.

ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಈ ಪರ್ಷಿಯನ್ ಪದ (ಹಿಂದೂ) ಹೇಗೆ ಬಂದಿತು ಎಂಬುದರ ಬಗ್ಗೆ ನೂರಾರು ದಾಖಲೆಗಳಿವೆ. ಸ್ವಾಮಿ ದಯಾನಂದ ಸರಸ್ವತಿ ಅವರ 'ಸತ್ಯಾರ್ಥ ಪ್ರಕಾಶ', ಡಾ.ಜಿ.ಎಸ್.ಪಾಟೀಲ್ ಅವರ 'ಬಸವ ಭಾರತ' ಮತ್ತು ಬಾಲಗಂಗಾಧರ ತಿಲಕರ 'ಕೇಸರಿ' ಪತ್ರಿಕೆಗಳಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇವು ಕೇವಲ 3-4 ಉದಾಹರಣೆಗಳಾಗಿವೆ, ವಿಕಿಪೀಡಿಯಾ ಅಥವಾ ಯಾವುದೇ ವೆಬ್‌ ಸೈಟ್‌ ನಲ್ಲಿ ಇಂತಹ ಅನೇಕ ಲೇಖನಗಳು ಲಭ್ಯವಿವೆ, ನೀವು ಅದನ್ನು ಓದಬೇಕು"ಎಂದು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರವಿವಾರ ರಾತ್ರಿ ನಿಪ್ಪಾಣಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, “ಹಿಂದೂ ಎಂಬ ಪದವು ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದರ ಚರ್ಚೆಯಾಗಲಿ" ಎಂದು ಹೇಳಿದ್ದರು. ಅಲ್ಲದೆ 'ಹಿಂದೂ ಶಬ್ದದ ಅರ್ಥ ತಿಳಿದರೆ ನಿಮಗೆ ನಾಚಿಕೆಯಾಗುತ್ತದೆ” ಎಂದೂ ಹೇಳಿದ್ದರು.

ಸತೀಶ್ ಜಾರಕಿಹೊಳಿ ಹೇಳಿಕೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿದ ಅವರು, “ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ. ನಾವು ಇದನ್ನು ಖಂಡಿಸುತ್ತೇವೆ” ಎಂದು ಹೇಳಿದ್ದಾರೆ.