ದೇವದತ್ ಪಡಿಕ್ಕಲ್ ಭರ್ಜರಿ ಶತಕ: ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ

ದೇವದತ್ ಪಡಿಕ್ಕಲ್ ಭರ್ಜರಿ ಶತಕ: ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ

ಜಾರ್ಖಂಡ್ ವಿರುದ್ಧ ರಣಜಿ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸಿದೆ. ಜಾರ್ಖಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದ ಕರ್ನಾಟಕ, ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್‌ಗಳಿಗೆ ಆಲೌಟ್ ಆಗುವ ಮೂಲಕ 136 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.

ದಲನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದ್ದ ಕರ್ನಾಟಕ ಎರಡನೇ ದಿನದಾಟ ಆರಂಭವಾಗುತ್ತಿದ್ದಂತೆ ಬೇಗನೆ ವಿಕೆಟ್ ಕಳೆದುಕೊಂಡಿತು. ಮೊದಲನೇ ದಿನದಾಟದ ಅಂತ್ಯಕ್ಕೆ 8 ರನ್ ಗಳಿಸಿದ ನಿಕಿನ್ ಜೋಸ್ ಎರಡನೇ ದಿನ ಒಂದು ರನ್‌ ಮಾತ್ರ ಗಳಿಸಿ ಔಟಾದರು.

ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಕೂಡ 19 ರನ್ ಗಳಿಸಿ ಮತ್ತೆ ನಿರಾಸೆ ಮೂಡಿಸಿದರು. ಶ್ರೇಯಸ್ ಗೋಪಾಲ್ 2 ರನ್ ಗಳಿಸಿ ರನೌಟ್ ಆದರು. 131 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡಕ್ಕೆ ದೇವದತ್ ಪಡಿಕ್ಕಲ್ ಮತ್ತು ಶುಭಾಂಗ್ ಹೆಗ್ಡೆ ಆಸರೆಯಾದರು.

ಇವರಿಬ್ಬರೂ 6 ನೇ ವಿಕೆಟ್‌ಗೆ 90 ರನ್‌ಗಳನ್ನು ಕಲೆ ಹಾಕುವ ಮೂಲಕ ಕರ್ನಾಟಕ ಇನ್ನಿಂಗ್ಸ್ ಮುನ್ನಡೆ ಪಡೆಯಲು ಕಾರಣವಾದರು. ಶುಭಾಂಗ್ ಹೆಗ್ಡೆ ಅಮೂಲ್ಯ 35 ರನ್ ಗಳಿಸಿ ದೇವದತ್ ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡಿದರು.

ದೇವದತ್ ಪಡಿಕ್ಕಲ್ ಭರ್ಜರಿ ಶತಕ

ಬ್ಯಾಟಿಂಗ್ ಮಾಡಲು ಕಷ್ಟಕರವಾದ ಪಿಚ್‌ನಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಪಡಿಕ್ಕಲ್ 175 ಎಸೆತಗಳಲ್ಲಿ 7 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ 114 ರನ್‌ ಗಳಿಸಿ ಕರ್ನಾಟಕ ತಂಡಕ್ಕೆ ಆಸರೆಯಾದರು. ಸ್ಪಿನ್‌ಗೆ ಹೆಚ್ಚಿನ ನೆರವು ನೀಡುತ್ತಿರುವ ಪಿಚ್‌ನಲ್ಲಿ ಪಡಿಕ್ಕಲ್ ಎಚ್ಚರಿಕೆಯಿಂದಲೇ ಇನ್ನಿಂಗ್ಸ್ ಕಟ್ಟಿದರು.

ವಿಕೆಟ್ ಕೀಪರ್ ಶರತ್ ಬಿಆರ್ ಕೂಡ 60 ರನ್ ಗಳಿಸಿ ಮಿಂಚಿದರು. 75 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಸಹಿತ ಅಮೂಲ್ಯ 60 ರನ್ ಗಳಿಸಿದರು. ಅಂತಿಮವಾಗಿ ಕರ್ನಾಟಕ 300 ರನ್‌ಗಳಿಗೆ ಆಲೌಟ್ ಆಗುವ ಮೂಲಕ 136 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಾರ್ಖಂಡ್ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 85 ರನ್ ಗಳಿಸಿದೆ. ಕುಮಾರ್ ಸೂರಜ್ ಅಜೇಯ 34 ಮತ್ತು ಕುಮಾರ್ ಕುಶಾಗರ ಅಜೇಯ 24 ರನ್ ಗಳಿಸಿದ್ದು 3ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.