ಟಿ20 ಕ್ರಿಕೆಟ್‌ನಲ್ಲಿ ಹೊಸ ಜವಾಬ್ಧಾರಿಯೊಂದಿಗ ಕಣಕ್ಕಿಳಿಯಲು ಬಯಸಿದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಅನುಭವಿ ಆಟಗಾರ ಟೆಸ್ಟ್ ಮಾದರಿಯಲ್ಲಿ ಅದ್ಭುತ ಸಾಧನೆ ಮಾಡಿದ್ದರೂ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸ್ಮಿತ್ ಸಾಧನೆ ಹೇಳಿಕೊಳ್ಳುವಂತಿಲ್ಲ. ಅದರಲ್ಲೂ ಟಿ20 ಮಾದರಿಯಲ್ಲಿ ಸ್ಮಿತ್ ಯಶಸ್ಸು ಸಾಧಿಸಿರುವುದು ತೀರಾ ಕಡಿಮೆ. ಹೀಗಾಗಿಯೇ ಕಳೆದ ಟಿ20 ವಿಶ್ವಕಪ್‌ನಲ್ಲಿಯೂ ಸ್ಮಿತ್‌ಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅವಕಾಶ ದೊರೆತಿತ್ತು.
ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡುತ್ತಿರುವ ಸ್ಟೀವ್ ಸ್ಮಿತ್ 56 ಎಸೆತಗಳಲ್ಲಿ 101 ರನ್‌ಗಳಿಸಿ ಅಬ್ಬರಿಸಿದ್ದಾರೆ. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ 7 ಸಿಕ್ಸರ್‌ಗಳು ಕೂಡಿತ್ತು. 180.35ರ ಸರಾಸರಿಯಲ್ಲಿ ಸ್ಮಿತ್ ಬ್ಯಾಟ್ ಬೀಸಿದ್ದರು. ಈ ಪ್ರದರ್ಶನದ ಬಳಿಕ ಸ್ಟೀವ್ ಸ್ಮಿತ್ ಟಿ20 ಮಾದರಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
"ನಾನು ಅಗ್ರ ಕ್ರಮಾಂಕದಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಟಿ20 ಮಾದರಿಯಲ್ಲಿ ಯಾರು ಆರಂಬಿಕನಾಗಿ ಕಣಕ್ಕಿಳಿಯಲು ಇಷ್ಟಪಡುವುದಿಲ್ಲ? ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವದರಿಂದ ನಿಮಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಇಬ್ಬರು ಮಾತ್ರವೇ ಹೊರಗಿರುತ್ತಾರೆ. ಇದರಿಂದ ಶೀಘ್ರವಾಗಿ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಬಳಿಕ ಫಿಲ್ಡರ್‌ಗಳು ಹೊರಗೆ ಹೋದ ನಂತರ ನಿಮ್ಮ ಸಾಮಾನ್ಯ ಹೊಡೆತಗಳನ್ನು ಬಾರಿಸಲು ಅವಕಾಶ ದೊರೆಯುತ್ತದೆ. ಬ್ಯಾಟಿಂಗ್ ಆನಂದಿಸಲು ಅದು ಸೂಕ್ತವಾದ ಕ್ರಮಾಂಕ. ಐಪಿಎಲ್‌ನಲ್ಲಿ ಕೆಲ ಸಂದರ್ಭಗಳಲ್ಲಿ ಆರಂಬಿಕನಾಗಿ ಜವಾಬ್ಧಾರಿ ವಹಿಸಿಕೊಂಡಿದ್ದೆ" ಎಂದು ಅಭಿಪ್ರಾಐ ಹಂಚಿಕೊಂಡಿದ್ದಾರೆ ಸ್ಟೀವ್ ಸ್ಮಿತ್.
33ರ ಹರೆಯದ ಸ್ಟೀವ್ ಸ್ಮಿತ್ ಕಳೆದ ವರ್ಷ ತಮ್ಮ ತವರಿನಲ್ಲೇ ನಡೆದ ಟಿ20 ವಿಶ್ವಕಪ್‌ನಲ್ಲಿ ಬಹುಪಾಲು ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದರು. ಅವರು ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಗುಂಪಿನ ಪಂದ್ಯದಲ್ಲಿ ಮಾತ್ರ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದು ಈ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಮಾತ್ರವೇ ಗಳಿಸಿದ್ದರು.
ಜನವರಿ 17 ರಂದು ಕಾಫ್ಸ್ ಹಾರ್ಬರ್‌ನಲ್ಲಿ ಸ್ಟ್ರೈಕರ್ಸ್ ವಿರುದ್ಧ 56 ಎಸೆತಗಳ ಶತಕ ಸಿಡಿಸುವುದಕ್ಕೂ ಮುನ್ನ ಕಳೆದ ಭಾನುವಾರ (ಜನವರಿ 15) ಎಸ್‌ಸಿಗಿಯ ಕಠಿಣ ಪಿಚ್‌ನಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ್ದರು. ಸಿಡ್ನಿ ಸಿಕ್ಸರ್ ಪರವಾಗಿ ಆ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 27 ಎಸೆತಗಳಲ್ಲಿ 36 ರನ್ ಗಳಿಸುವುದರೊಂದಿಗೆ ಮಿಂಚಿದ್ದರು