ಕರ್ನಾಟಕ ಚುನಾವಣೆ: ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರ ಏಕೆ ಸುರಕ್ಷಿತ..? ವಿವರಣೆ

ಮೈಸೂರು, ಮಾರ್ಚ್. 26: ಮುಂದಿನ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಶನಿವಾರ ಪ್ರಕಟಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಿದೆ.
ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ ಎಂಬ ತೀವ್ರ ಊಹಾಪೋಹಗಳಿಗೆ ಒಂದು ರೀತಿಯಲ್ಲಿ ತೆರೆ ಬಿದ್ದಿದೆ. ಆದರೆ, ನಾನು ವರುಣಾ ಮತ್ತು ಕೋಲಾರ ಎರಡು ಕ್ಷೇತ್ರಗಳಿಂದ ಟಿಕೆಟ್ ಕೇಳಿದ್ದೇನೆ ಎನ್ನುವ ಮೂಲಕ ಮತ್ತೆ ಜನರಲ್ಲಿ ಹೊಸ ಕುತೂಹಲ ಹುಟ್ಟು ಹಾಕಿದ್ದಾರೆ ಮಾಜಿ ಮುಖ್ಯಮಂತ್ರಿ.
ಆದರೆ, ಚಾಮರಾಜಪೇಟೆ, ಕೋಲಾರ, ಬಾದಾಮಿ, ಕೊಪ್ಪಳ, ವರುಣಾ, ಚಾಮರಾಜನಗರ ಕಳೆದ ಕೆಲವು ತಿಂಗಳುಗಳಿಂದ ಅವರ ಸಂಭಾವ್ಯ ಕ್ಷೇತ್ರಗಳಾಗಿ ಕೇಳಿ ಬರುತ್ತಿದ್ದರೂ, 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರ ಸೋಲಿನಿಂದ ಕಂಗೆಟ್ಟಿರುವ ಅವರ ಬೆಂಬಲಿಗರು ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದರು. ಸದ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧಿಸುತ್ತಿದ್ದಾರೆ.
ಹಾಗಾದರೆ, ಸಿದ್ದರಾಮಯ್ಯನವರಿಗೆ ವರುಣಾ ಸುರಕ್ಷಿತ ಕ್ಷೇತ್ರವೇ...? ಯಾಕೆ ಹೀಗೆ ಪ್ರಶ್ನೆ ಮೂಡುತ್ತದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ 1983ರಲ್ಲಿ ಲೋಕ ದಳದಿಂದ ಪಾದಾರ್ಪಣೆ ಮಾಡಿದ ಕ್ಷೇತ್ರವಿದು. ಅಂದಿನಿಂದ ಎಂಟು ಚುನಾವಣೆಗೆ ಸ್ಪರ್ಧಿಸಿ ಐದರಲ್ಲಿ ಗೆದ್ದಿದ್ದಾರೆ. ಅವರು ಜೆಡಿಎಸ್‌ನಿಂದ ಉಚ್ಛಾಟಿತರಾಗಿ ಕಾಂಗ್ರೆಸ್ ಸೇರಿದರು.
ಇದಾದ ನಂತರ, 2006 ರಲ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಚುನಾವಣೆಗಳಲ್ಲಿ ಎದುರಿಸಿ 257 ಮತಗಳ ಅಂತರದಿಂದ ಗೆದ್ದರು. 2008 ರಲ್ಲಿ ಕ್ಷೇತ್ರಗಳ ವಿಂಗಡಣೆಯ ನಂತರ, ಮೈಸೂರು ನಗರಕ್ಕೆ ಸಮೀಪವಿರುವ ಗ್ರಾಮಾಂತರ ಭಾಗವಾದ ವರುಣಾ ಕ್ಷೇತ್ರ, ನಂಜನಗೂಡಿನ ಬದನವಾಳು ಹೋಬಳಿಯ ಭಾಗಗಳಾದ ಚಾತ್ರ ಮತ್ತು ಬಿಲ್ಗೆರೆ, ಮೈಸೂರು ತಾಲ್ಲೂಕಿನಿಂದ ವರುಣ ಹೋಬಳಿ ಮತ್ತು ಟಿ ನರಸೀಪುರದ ಕಸಬಾ ಹೋಬಳಿಗಳೊಂದಿಗೆ ರಚನೆಯಾಯಿತು.
ವರುಣಾ ಕ್ಷೇತ್ರ ಲಿಂಗಾಯತರಿಂದ ಪ್ರಾಬಲ್ಯ ಹೊಂದಿದೆ. ನಂತರ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು (ನಾಯಕ), ಕುರುಬರು, ಉಪ್ಪಾರರು, ಇತರ ಸೂಕ್ಷ್ಮ ಹಿಂದುಳಿದ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ಒಕ್ಕಲಿಗರ ಒಂದು ಸಣ್ಣ ಜನಸಂಖ್ಯೆ ಈ ಕ್ಷೇತ್ರದಲ್ಲಿದೆ. 10,000 ಕ್ಕಿಂತ ಕಡಿಮೆ ಒಕ್ಕಲಿಗ ಮತದಾರರು ಇಲ್ಲಿರುವುದು ಸಿದ್ದರಾಮಯ್ಯನವರ ಪುನರಾವರ್ತಿತ ಗೆಲುವಿಗೆ ಕೊಡುಗೆ ನೀಡುತ್ತಿದೆ ಎಂದು ಭಾವಿಸಲಾಗಿದೆ.
ಜನಸಂಖ್ಯೆಯ ಮಿಶ್ರಣವು ಅವರಿಗೆ ಅಹಿಂದ (ಹಿಂದುಳಿದ ವರ್ಗ) ಸಮುದಾಯಗಳನ್ನು ಕ್ರೋಢೀಕರಿಸಲು ಮತ್ತು 2008 ಮತ್ತು 2013 ರಲ್ಲಿ ಅನುಕೂಲಕರ ಅಂತರದಲ್ಲಿ ಗೆಲ್ಲಲು ಅವರಿಗೆ ಒಂದು ಕೊಡುಗೆ ನೀಡಿದೆ. ಇಲ್ಲಿನ ಗೆಲುವು ಅವರನ್ನು ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯನ್ನಾಗಿಸಿದೆ. ಈ ಕ್ಷೇತ್ರವು ಅವರಿಗೆ ಅದೃಷ್ಟವೆಂದು ಪರಿಗಣಿಸಲಾಗಿದೆ.
ಈ ಕ್ಷೇತ್ರದ ಗ್ರಾಮಗಳಲ್ಲಿ ವಿಶಾಲವಾದ, ಕಾಂಕ್ರೀಟ್ ರಸ್ತೆಗಳು, ತುಂಬಿದ ಕೆರೆಗಳು, ಆಧುನೀಕರಿಸಿದ ನೀರಾವರಿ ಕಾಲುವೆಗಳು, ಕೈಗಾರಿಕಾ ಪ್ರದೇಶಗಳು ಮತ್ತು ಹೊಸ ಹಾಸ್ಟೆಲ್‌ಗಳು, ಶಾಲೆಗಳು ಮತ್ತು ಕಾಲೇಜು ಕಟ್ಟಡಗಳೊಂದಿಗೆ ಉತ್ತಮ ಬದಲಾವಣೆಗೆ ಸಾಕ್ಷಿಯಾಗಿದೆ. ಹಾಲಿ ಶಾಸಕರಾಗಿರುವ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಿದ್ದಾರೆ.
ಹಾಲಿ ಶಾಸಕರಾಗಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಕೋಲಾರದಿಂದ ದೂರ ಉಳಿಯುವಂತೆ ಮಾಡಿದ್ದು ಕಾಂಗ್ರೆಸ್ ಆಂತರಿಕ ಸಮೀಕ್ಷೆ. ಕೋಲಾರದಲ್ಲಿ ಸಿದ್ದರಾಮಯ್ಯ ಕಣಕ್ಕಿಳಿದರೇ ಪಕ್ಷದ ಅಭ್ಯರ್ಥಿ ಗೆಲುವ ಸುಳಿವು ಸಿಕ್ಕಿಲ್ಲ. ಇದೀಗ ವರುಣಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮುಂದಾಳತ್ವ ವಹಿಸಲು ಯತೀಂದ್ರ ಮತ್ತು ಪಕ್ಷದ ಕಾರ್ಯಕರ್ತರು ಮುಂದಾಗಿದ್ದು, ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಅವರಿಗೆ ರಾಜ್ಯ ಪ್ರವಾಸ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಇತ್ತೀಚೆಗಷ್ಟೇ ಸಿದ್ದರಾಮಯ್ಯ ತಮ್ಮ ಪುತ್ರನೊಂದಿಗೆ ವರುಣಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಮಾರ್ಚ್ 28 ಮತ್ತು 29 ರಂದು ಕ್ಷೇತ್ರಕ್ಕೆ ಭೇಟಿ ನೀಡಿ ಸಮಾಜದ ಎಲ್ಲಾ ವರ್ಗಗಳ ಮುಂಚೂಣಿ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಮತದಾರರು ಮತ್ತು ಅಭಿವೃದ್ಧಿ ಕಾರ್ಯಗಳ ಕಾರಣದಿಮದ ಅವರಿಗೆ ಗೆಲುವು ದೊರೆಯಬಹುದು. ಸಿದ್ದರಾಮಯ್ಯ ಅವರಿಂದಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ನೆರೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲಾಭ ನೀಡುತ್ತದೆ.