ಇಂದು ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜನ್ಮದಿನ : ʼ116 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣʼ
ತುಮಕೂರು: ಇಂದು ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ116ನೇ ಜಯಂತಿ ಹಿನ್ನಲೆ 116 ಮಕ್ಕಳಿಗೆ ಸ್ವಾಮೀಜಿಯವರ ಹೆಸರು ನಾಮಕರಣ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀಗಳ 116ನೇ ಜಯಂತಿ ಈ ಹಿನ್ನೆಲೆ ಶ್ರೀ ಮಠದಲ್ಲಿ ಬೆಳಗ್ಗಿನಿಂದಲೇ ಅದ್ದೂರಿ ಪೂಜಾ ಕೈಂಕರ್ಯಗಳು ಆರಂಭವಾಗಿವೆ.
ಇಂದು ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ ಅಷ್ಟೇ ಅಲ್ಲದೇ ಬೆಳಿಗ್ಗೆ 11 ಗಂಟೆಗೆ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಅದ್ದೂರಿ ಸಭಾ ಕಾರ್ಯಕ್ರಮ ಜರುಗಲಿದೆ.
ಮುಂದಿನ ವಿಧಾನ ಸಭೆ ಚುನಾವಣೆ ಸಂಹಿತೆ ಜಾರಿ ಇರುವ ಹಿನ್ನೆಲೆ ರಾಜಕಾರಣಿಗಳು, ಜನಪ್ರತಿನಿಧಿಗಳು ಭಾಗಿಯಾಗುವುದಿಲ್ಲ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರಭಾಕರ್ ಕೋರೆ ಸೇರಿದಂತೆ ವಿವಿಧ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿದು ಬಂದಿದೆ.