ಅಪ್ಪು ಸ್ಥಾನ ತುಂಬೋಕೆಲ್ಲಾ ಆಗೋದಿಲ್ಲ; ಕೆಸಿಸಿ ಪತ್ರಿಕಾಗೋಷ್ಠಿಯಲ್ಲಿ ಗೆಳೆಯ ಪುನೀತ್ ಬಗ್ಗೆ ಕಿಚ್ಚನ ಮಾತು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಅಗಲಿ ವರ್ಷ ಕಳೆದರೂ ಸಹ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಯಾವುದೇ ಕಾರ್ಯಕ್ರಮವಿರಲಿ, ಸಂದರ್ಶನವಿರಲಿ ಅಲ್ಲಿ ಪುನೀತ್ ಬಗೆಗಿನ ಯಾವುದಾದರೊಂದು ಚರ್ಚೆ ಇದ್ದೇ ಇರುತ್ತದೆ. ಅದರಲ್ಲೂ ಎಲ್ಲಾ ಕಲಾವಿದರಿಗೂ ಸಮಾನ ಗೌರವ ನೀಡಿ ಸ್ನೇಹ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್ ಕುರಿತು ಪುಟ್ಟ ಕಲಾವಿದರಿಂದ ಹಿಡಿದು ಸ್ಟಾರ್ ನಟರವರೆಗೂ ಮಾತನಾಡಿದ್ದಾರೆ ಹಾಗೂ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಬಾಲ್ಯದಿಂದಲೇ ಸ್ನೇಹಿತಾನಾಗಿದ್ದ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟ ನಂತರವೂ ಸಹ ಅಪ್ಪು ಜತೆ ಒಳ್ಳೆಯ ಒಡನಾಟವನ್ನು ಹೊಂದಿದ್ರು. ಇಬ್ಬರೂ ಚಿಕ್ಕ ವಯಸ್ಸಿನಲ್ಲಿದ್ದಾಗ ಪರಸ್ಪರ ಅಪ್ಪಿಕೊಂಡು ಫೋಟೊ ತೆಗೆಸಿಕೊಂಡಿದ್ದರು. ಹೀಗೆ ಪುನೀತ್ ರಾಜ್‌ಕುಮಾರ್ ಜತೆ ಇಷ್ಟು ಸ್ನೇಹ ಬಾಂಧವ್ಯವನ್ನು ಹೊಂದಿದ್ದ ಕಿಚ್ಚ ಸುದೀಪ್ ಅಪ್ಪು ನಿಧನ ಹೊಂದಿದ್ದ ಸಂದರ್ಭದಲ್ಲಿ ಕಣ್ಣೀರು ಹಾಕಿದ್ರು. ಹಲವಾರು ಸಂದರ್ಶನಗಳಲ್ಲಿ ಅಪ್ಪು ಅವರನ್ನು ನೆನಪು ಮಾಡಿಕೊಂಡು ಅವರ ಜತೆ ಕಳೆದ ಕ್ಷಣಗಳ ಬಗ್ಗೆ ಮಾತನಾಡಿದ್ದರು.
ಇನ್ನು ಸದ್ಯ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್‌ನ ತಯಾರಿಯಲ್ಲಿರುವ ಕಿಚ್ಚ ಸುದೀಪ್ ನಿನ್ನೆ ( ಜನವರಿ 23 ) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಟೂರ್ನಿಯ ಕುರಿತಾದ ಕೆಲ ಮಾಹಿತಿಗಳನ್ನು ಹಂಚಿಕೊಂಡರು ಹಾಗೂ ಟೂರ್ನಿಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದರು. ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಎದುರಾದ ಪ್ರಶ್ನೆಯೊಂದಕ್ಕೆ ಸುದೀಪ್ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಾಗೂ ಅಪ್ಪು ಅಭಿಮಾನಿಗಳು ಮತ್ತು ಸಿನಿ ರಸಿಕರು ಸುದೀಪ್ ಕೊಟ್ಟ ಈ ಉತ್ತರಕ್ಕೆ ಫಿದಾ ಆಗಿದ್ದಾರೆ.