ಅಂತಿಮ 2 ಟೆಸ್ಟ್‌ಗಳಿಗೆ ಪ್ರಕಟಿಸಿದ ತಂಡದಲ್ಲಿ ಕೆಎಲ್ ರಾಹುಲ್‌ಗೆ ಶಾಕ್: ಆಡುವ ಬಳಗದಿಂದ ಕೈಬಿಡುವ ಸೂಚನೆಯಾ?
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಎರಡು ತಂಡಗಳಿಗೆ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾದ ಬಳಗವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಈ ತಂಡಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಈ ತಂಡದಲ್ಲಿ ಭಾರತದ ಅನುಭವಿ ಆಟಗಾರ ಕೆಎಲ್ ರಾಹುಲ್‌ಗೆ ಸದ್ದಿಲ್ಲದೆ ಆಘಾತವೊಂದನ್ನು ನೀಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿದ್ದ ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಉಪನಾಯಕ ಎಂದು ಉಲ್ಲೇಖಿಸಲಾಗಿತ್ತು. ಅಂತಿಮ ಎರಡು ತಂಡಗಳಿಗೆ ಪ್ರಕಟಿಸಿರುವ ತಂಡದಲ್ಲಿ ಕೆಎಲ್ ರಾಹುಲ್ ಹೆಸರಿನ ಮುಂದೆ ಉಪನಾಯಕ ಎಂದು ಉಲ್ಲೇಖಿಸಿಲ್ಲ. ಈ ಮೂಲಕ ಕೆಎಲ್ ರಾಹುಲ್ ಅವರಿಂದ ಟೆಸ್ಟ್ ಉಪನಾಯಕನ ಪಟ್ಟ ಕೂಡ ತಪ್ಪಿದೆ.
ಈ ಬೆಳವಣಿಗೆಯಿಂದಾಗಿ ಇದೀಗ ಕರ್ನಾಟಕದ ಆಟಗಾರನಿಗೆ ಆಡುವ ಬಳಗದಲ್ಲಿ ಸ್ಥಾನ ದೊರೆಯುವ ಬಗ್ಗೆಯೂ ಅನುಮಾನಗಳುಂಟಾಗಿದೆ. ಕೆಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣದಿಂದಾಗಿ ಆಡುವ ಬಳಗದಿಂದ ಹೊರಗಿಡಬೇಕು ಎಂಬ ಅಭಿಪ್ರಾಯಗಳು ಕೇಳತೊಡಗಿದೆ. ಆದರೆ ಉಪನಾಯಕನಾಗಿರುವ ಆಟಗಾರನನ್ನೇ ತಂಡದಿಂದ ಹೊರಗಿಡುವ ಬಗ್ಗೆಯೂ ಪ್ರಶ್ನೆಗಳು ಎಳತೊಡಗಿತ್ತು. ಇದೀಗ ಕೆಎಲ್ ರಾಹುಲ್ ಅವರಿಂದ ಉಪನಾಯಕನ ಪಟ್ಟ ಕೈತಪ್ಪಿರುವುದು ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದಂತಾಗಿದೆ.
ಕಳಪೆ ಪ್ರದರ್ಶನ ನೀಡಿದ ಕೆಎಲ್
ಟೀಮ್ ಇಂಡಿಯಾದ ಅನುಭವಿ ಆಟಗಾರನಾಗಿರುವ ಕೆಎಲ್ ರಾಹುಲ್ ಕಳೆದ ಒಂದೆರಡು ವರ್ಷಗಳಿಂದ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ರಾಹುಲ್ ಬ್ಯಾಟ್‌ನಿಂದ ರನ್ ಹರಿದು ಬಂದಿಲ್ಲ. ಇದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾದ ಬಳಗವನ್ನು ಹೆಸರಿಸಲಾಗಿದ್ದು ಸದ್ದಿಲ್ಲದೆ ಕೆಎಲ್ ರಾಹುಲ್‌ಗೆ ಶಾಕ್ ನೀಡಲಾಗಿದೆ.
ಕೆಎಲ್ ರಾಹುಲ್‌ಗೆ ಬೆಂಬಲ ಎಂದಿದ್ದ ಕೋಚ್ ದ್ರಾವಿಡ್
ಇನ್ನು ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ಬಳಿಕ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕೆಎಲ್ ರಾಹುಲ್ ಅವರನ್ನು ಆಡುವ ಬಳಗದಿಂದ ಕೈಬಿಡುವ ಯೋಚನೆಯಿಲ್ಲ ಎಂಬ ಸುಳಿವು ನೀಡಿದ್ದರು. ಅಲ್ಲದೆ ರಾಹುಲ್ ಅವರಂತಾ ಆಟಗಾರನಿಗೆ ಇಂಥಾ ಸಂದರ್ಭದಲ್ಲಿ ಬೆಂಬಲವಾಗಿ ನಿಲ್ಲುವುದಾಗಿಯೂ ದ್ರಾವಿಡ್ ಹೇಳಿಕೆ ನೀಡಿದ್ದರು
ಅಂತಿಮ ಎರಡು ಪಂದ್ಯಗಳಿಗೆ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್ , ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕಟ್