245 ಎಕರೆಯಲ್ಲಿನ ಕಟ್ಟಡಗಳ ಸಕ್ರಮಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 13 ಗ್ರಾಮಗಳ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲಿರುವ 245 ಎಕರೆ 16 ಗುಂಟೆ ಜಮೀನಿನಲ್ಲಿ ಈಗಾಗಲೇ ಇರುವ ಕಟ್ಟಡಗಳ ಸಕ್ರಮಕ್ಕೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಅರ್ಜಿಗಳನ್ನು ಆಹ್ವಾನಿಸಿದೆ.
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆಯಿಂದ ಹಲವು ಆಸ್ತಿಗಳನ್ನು 2008ರಲ್ಲಿ ಕೈಬಿಡಲಾಗಿತ್ತು. ಈವರೆಗೆ 3,200 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆ ಜಮೀನುಗಳ ಮಧ್ಯ ಭಾಗದಲ್ಲೂ ಇರುವ 245 ಎಕರೆ 16 ಗುಂಟೆ ವಿಸ್ತೀರ್ಣದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆಗಸ್ಟ್ 23ರಂದು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
ಈಗ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಜಮೀನುಗಳಲ್ಲಿ ಆ. 23ಕ್ಕೂ ಮೊದಲು ಇದ್ದ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಕಟ್ಟಡಗಳ ಮಾಲೀಕರು ಸೂಕ್ತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸ್ವೀಕರಿಸಲು ಬಿಡಿಎ ಕೇಂದ್ರ ಕಚೇರಿಯಲ್ಲಿ ಇದೇ 14ರಿಂದ ಸಹಾಯ ಕೇಂದ್ರ ಆರಂಭಿಸಲಾಗುವುದು. ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಸಹಾಯ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಸಮಿತಿ ತಿಳಿಸಿದೆ.
ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಕೋರಿ ಅವುಗಳ ಮಾಲೀಕರು ಸಮಿತಿಯ ವೆಬ್ ಪೋರ್ಟಲ್ jcc-skl.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೇರವಾಗಿ ಸಹಾಯ ಕೇಂದ್ರದಲ್ಲೂ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳನ್ನು ಸಮಿತಿಯ ವೆಬ್ ಪೋರ್ಟಲ್ ಹಾಗೂ ಸಹಾಯ ಕೇಂದ್ರದಲ್ಲಿ ಪಡೆಯಬಹುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ಇವೆ ಜಮೀನು?: ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತರ ಹೋಬಳಿಯ ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ, ಗಾಣಿಗರಹಳ್ಳಿ, ಯಲಹಂಕ ಹೋಬಳಿಯ ಆವಲಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ವೀರಸಾಗರ, ದೊಡ್ಡಬೆಟ್ಟಹಳ್ಳಿ, ಶ್ಯಾಮರಾಜಪುರ, ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿಯ ಬ್ಯಾಲಕೆರೆ, ಕಾಳತಿಮ್ಮನಹಳ್ಳಿ, ಗುಣಿ ಅಗ್ರಹಾರ ಮತ್ತು ಮೇಡಿ ಅಗ್ರಹಾರ ಗ್ರಾಮಗಳಲ್ಲಿ ಈ ಜಮೀನುಗಳು ಇವೆ ಎಂದು ಸಮಿತಿ ಹೇಳಿದೆ.