ಸ್ವಾಭಿಮಾನಿ ಸೆರಗೊಡ್ಡಿದ್ದಿನಿ ಆ ಸೆರಗಿಗೆ ಭೀಕ್ಷೆ ಹಾಕಿ - ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

ಸ್ವಾಭಿಮಾನಿ ಸೆರಗೊಡ್ಡಿದ್ದಿನಿ ಆ ಸೆರಗಿಗೆ ಭೀಕ್ಷೆ ಹಾಕಿ - ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

ಮಂಡ್ಯ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಶಾಸಕನಾಗುವುದು ಶತಸಿದ್ಧವಾಗಿದ್ದು, ಇದನ್ನು ತಪ್ಪಿಸಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಭರವಸೆ ವ್ಯಕ್ತಪಡಿಸಿದರು.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಲ್.ಆರ್.ಶಿವರಾಮೇಗೌಡ ಸ್ವಾಭಿಮಾನ ಪರ್ವ-2023 ಬೃಹತ್ ಸಭೆ ಉದ್ಘಾಟಿಸಿ ಮಾತನಾಡಿ, ಈಗಾಗಲೇ ನನ್ನ ಹಣೆಬರಹದಲ್ಲಿ ಮುಂದಿನ ಚುನಾವಣೆಯಲ್ಲಿ ಶಾಸಕನಾಗುತ್ತೀಯಾ ಎಂದು ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಶಾಸಕನಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2008ರಿಂದ ನಾನು ಶಾಸಕ ಸ್ಥಾನದ ಚುನಾವಣೆಗೆ ಬಂದಿಲ್ಲ. 2008ರಲ್ಲಿ ಕಾಂಗ್ರೆಸ್ಸಿನಿಂದ ನಿಲ್ಲಲು ಪ್ರಯತ್ನ ಮಾಡಿದ್ದೆ. ಆಗ ಟಿಕೆಟ್ ಸಿಗದೆ ಹೋದಾಗ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಒತ್ತಡ ಬಂದಿತ್ತು. ಆ ವೇಳೆ ಎಸ್.ಎಂ.ಕೃಷ್ಣ ಸೇರಿದಂತೆ ಹಿರಿಯರ ಸಲಹೆಯಂತೆ ಚುನಾವಣೆಗೆ ಸ್ಪರ್ಧಿಸದೆ ತಟಸ್ಥನಾದೆ ಎಂದರು.

ನಾಗಮಂಗಲದಲ್ಲಿ ಕಾಂಗ್ರೆಸ್ ಕಟ್ಟಿದ್ದು ನಾನು. ನಾನು ಮಾಡಿದ ಅಡುಗೆಯನ್ನ ಉಂಡಿದ್ದು ಸುರೇಶ್ ಗೌಡ. ಆಗ ನನ್ನ ಬಿಟ್ಟು ಸುರೇಶ್ ಗೌಡರಿಗೆ ಟಿಕೆಟ್ ಕೊಟ್ರು. ನಾನು ಆ ಚುನಾವಣೆಗೆ ನಿಲ್ಲಲು ಪ್ರಯತ್ನ ಮಾಡಿದ್ರೆ ಸುರೇಶ್ ಗೌಡ ಶಾಸಕನಾಗುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು.

ನನಗೆ ರಾಜಕೀಯದಲ್ಲಿ ನಿರಂತರವಾಗಿ ಮೋಸ ಮಾಡಿದರು. ನಾನು ಸುಮ್ಮನೇ ಕೂರಲಿಲ್ಲ. ಕಳೆದ 6 ತಿಂಗಳಿಂದ ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡ್ತಿದ್ದೀನಿ. 25 ವರ್ಷದಿಂದ ಚುನಾವಣೆಯಿಂದ ಹೊರಗಿದ್ದೆ. ಈಗ ಪಕ್ಷೇತರವಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ. ಕೊಪ್ಪ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ನಾನು ಶಾಸಕನಾಗಿ ಆಯ್ಕೆಯಾದರೆ ಕೊಪ್ಪ ಹೋಬಳಿಯ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಹಾಗೂ ವಾರಕ್ಕೆ ಒಂದು ಬಾರಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಈ ಭಾಗದ ಜನರು ಸರ್ಕಾರಿ ಕಚೇರಿಗಳಿಗೆ ಅಲೆಸುವುದನ್ನು ತಪ್ಪಿಸುತ್ತೇನೆ ಎಂದು ಭರವಸೆ ನೀಡಿದರು.

ಕೊಪ್ಪ ಹೋಬಳಿಯ ಮತದಾರರು ಚೆಲುವರಾಯಸ್ವಾಮಿ ಹಾಗೂ ಸುರೇಶ್ ಗೌಡ ಅವರನ್ನು ಶಾಸಕರನ್ನಾಗಿ ನೋಡಿದ್ದೀರಿ, ಅವರಿಂದ ಕೊಪ್ಪ ಹೋಬಳಿ ಯಾವುದೇ ಅಭಿವೃದ್ದಿ ಕಂಡಿಲ್ಲ. ಇದರಿಂದ ಕೊಪ್ಪ ಹೋಬಳಿ ಮತದಾರರು ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ನಿಮ್ಮಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದರು.
ನಾನು ಸ್ವಾಭಿಮಾನದ ಹೆಸರಲ್ಲಿ ನಿಮ್ಮ ಮುಂದೆ ಬಂದಿದ್ದೇನೆ. ಸ್ಥಳೀಯ ಮುಖಂಡರು ನನ್ನ ಜತೆಯಲ್ಲಿ ನಿಂತಿದ್ದಾರೆ.ದಯವಿಟ್ಟು ನನ್ನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯ ಜೆಡಿಎಸ್ ಭದ್ರಕೋಟೆ ಅನ್ನೋದು ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಚ್ಚಿ ಹೋಯ್ತು. ಆಗ ಸಿಎಂ ಮಗನನ್ನೂ ಮಂಡ್ಯ ಜನ ಸೋಲಿಸಿದರು. ಸುಮಲತಾರ ಸ್ವಾಭಿಮಾನಕ್ಕೆ ಮತ ಹಾಕಿದ್ದೀರಿ. ನಾನು ಈ ಹಿಂದೆಯೂ ಎರಡು ಬಾರಿ ಪಕ್ಷೇತರನಾಗಿ ಗೆದ್ದಿರೋ ಅನುಭವ ಇದೆ. ಈಗಲೂ ಯಾರ ಹಂಗಿಲ್ಲದೇ ಸ್ವತಂತ್ರವಾಗಿ ನಿಲ್ತೀನಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮಾತನಾಡಿ, ನಮ್ಮ ತಂದೆ ಎಲ್.ಆರ್.ಶಿವರಾಮೇಗೌಡ 40 ವರ್ಷಗಳಿಂದ ಸಾರ್ವಜನಿಕರ ಸೇವೆಯಲ್ಲಿದ್ದಾರೆ. 25 ವರ್ಷಗಳಿಂದ ಅಧಿಕಾರವಿಲ್ಲದ್ದರೂ ನಿಮ್ಮಗಳ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

2008ರಿಂದ ಕೊಪ್ಪ ಹೋಬಳಿ ನಾಗಮಂಗಲ ಕ್ಷೇತ್ರಕ್ಕೆ ಸೇರಿದೆ. ಇದುವರೆಗೆ ಕೊಪ್ಪ ಹೋಬಳಿ ಅಭಿವೃದ್ಧಿಯೇ ಆಗಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡ್ತಿದೆ. ಕ್ಷೇತ್ರದ ಅಭಿವೃದ್ಧಿ ಆಗಬೇಕಿದೆ. ಹೀಗಾಗಿ ಸ್ವಾಭಿಮಾನದ ಹೆಸರಲ್ಲಿ ಮತ್ತೆ ನಿಮ್ಮ ಮುಂದೆ ಬಂದಿದ್ದೇವೆ ನಮಗೆ ಸಹಕಾರ ನೀಡಿ ಎಂದರು.

ಒಂದು ಆಡಿಯೋ ಇಟ್ಕೊಂಡ್ ಶಿವರಾಮೇಗೌಡರನ್ನ ಜೆಡಿಎಸ್ ಪಕ್ಷದಿಂದ ಅಮಾನತ್ತು ಮಾಡಿದರು. 2008ರಲ್ಲಿ ಶಿವರಾಮೇಗೌಡ ಜೆಡಿಎಸ್ ಗೆ ಬೇಕಿತ್ತು. ಇವಾಗ ನಮ್ಮ ತಂದೆ ಅವರಿಗೆ ಬೇಡವಾಗಿದ್ದಾರೆ. ಈ ಬಾರಿ ನಮ್ಮ ತಂದೆಯನ್ನ ಪಕ್ಷೇತರವಾಗಿ ಗೆಲ್ಲಿಸಿ. ಶಿವರಾಮೇಗೌಡರಿಗೆ ಮೋಸ ಮಾಡಿದವರಿಗೆ ತಕ್ಕಪಾಠ ಕಲಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಕೊಪ್ಪದ ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಆವರಣದಿಂದ ಎಲ್.ಆರ್.ಶಿವರಾಮೇಗೌಡ ಅವರನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾವಿರಾರು ಸಂಖ್ಯೆ ಜನರು ತೆರೆದ ವಾಹನದಲ್ಲಿ ವೇದಿಕೆ ತನಕ ಮೆರವಣಿಗೆ ಮೂಲಕ ಕರೆತಂದಿದ್ದು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಕೊಪ್ಪ ಹೋಬಳಿಯ 8 ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರಾದ ಜಯಲಕ್ಷಮ್ಮ, ಕೊಪ್ಪ ರಮೇಶ್, ನಾಗರಾಜು, ಅವ್ವೇರಹಳ್ಳಿ ನಾಗರಾಜು, ಪಾಪಣ್ಣ, ಚಿಕ್ಕೀರಣ್ಣ, ಕೃಷ್ಣೇಗೌಡ, ಯೋಗರಾಜು, ಸತೀಶ್, ಶಿವರಾಮು, ಅಫ್ಸರ್, ಸಿದ್ದಲಿಂಗು, ರಾಮೇಗೌಡ, ಉಮೇಶ್, ಪುಟ್ಟಸ್ವಾಮಿ, ಮಧು ಸೇರಿದಂತೆ ಇತರರು ಇದ್ದರು.

ವರದಿ : ಗಿರೀಶ್ ರಾಜ್ ಮಂಡ್ಯ