ಸುಪ್ರೀಂ ತೀರ್ಪಿನಲ್ಲಿ ಬಸವೇಶ್ವರರ ವಚನ; ಮಾತು ಹೇಗಿರಬೇಕೆಂದು ಜನಪ್ರತಿನಿಧಿಗಳಿಗೆ ಸಲಹೆ

ಸುಪ್ರೀಂ ತೀರ್ಪಿನಲ್ಲಿ ಬಸವೇಶ್ವರರ ವಚನ; ಮಾತು ಹೇಗಿರಬೇಕೆಂದು ಜನಪ್ರತಿನಿಧಿಗಳಿಗೆ ಸಲಹೆ

ನವದೆಹಲಿ: ಬಸವಣ್ಣನವರ ಈ ವಚನವನ್ನು ತೀರ್ಪಿನಲ್ಲಿ ದಾಖಲಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಜನಪ್ರತಿನಿಧಿಗಳಿಗೆ ಈ ಮೂಲಕ ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.

ಸಂಸದರು, ಶಾಸಕರು, ಮಂತ್ರಿಗಳು ಸೇರಿದಂತೆ ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿಯಂತ್ರಣ ಹೇರಲು ಸಾಧ್ಯವಿದೆಯೇ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಸಾಂವಿಧಾನಿಕ ಪೀಠದ ಇತರ ನಾಲ್ವರು ಸದಸ್ಯರ ಅಭಿಪ್ರಾಯಕ್ಕೆ ಭಿನ್ನವಾದ ತೀರ್ಪನ್ನು ನ್ಯಾ.ಬಿ.ವಿ. ನಾಗರತ್ನ ಬರೆದಿದ್ದಾರೆ. ಅದರಲ್ಲಿ ಬಸವಣ್ಣನ ವಚನ ಉಲ್ಲೇಖಿಸಿ ಗಮನ ಸೆಳೆದಿದ್ದಾರೆ. ಅಧಿಕ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಪ್ರಶ್ನಿಸಿದ ಅರ್ಜಿ ಕುರಿತು ಸೋಮವಾರ ಪ್ರಕಟವಾದ ಇದೇ ಪೀಠದ ತೀರ್ಪಿನಲ್ಲೂ ಭಿನ್ನ ತೀರ್ಪು ದಾಖಲಿಸಿದ್ದರು.

ಇತರ ನ್ಯಾಯಮೂರ್ತಿಗಳ ಅಭಿಪ್ರಾಯ: ಪೀಠದ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಎ.ಎಸ್.ಬೋಪಣ್ಣ, ಬಿ.ಆರ್. ಗವಾಯಿ, ವಿ. ರಾಮಸುಬ್ರಹ್ಮಣ್ಯಂ ಸಾಮೂಹಿಕ ಹೊಣೆಗಾರಿಕೆಯ ಸಂದರ್ಭದಲ್ಲಿ ಓರ್ವ ಸಚಿವರ ಹೇಳಿಕೆಯನ್ನು ಸರ್ಕಾರದ ಅಭಿಪ್ರಾಯವೆಂದು ಹೇಳಲಾಗದು ಎಂದಿದ್ದಾರೆ.

ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು ಸಂವಿಧಾನದ ಪರಿಚ್ಛೇದ 19 (2)ರ ಅಡಿಯಲ್ಲಿ ಸೂಚಿಸಲಾದ ಮಿತಿಯಲ್ಲೇ ಇರುತ್ತದೆ. ಹೆಚ್ಚುವರಿ ನಿಯಂತ್ರಣ ಹೇರಲು ಸಾಧ್ಯವಿಲ್ಲ. ಆರ್ಟಿಕಲ್ 19(2)ರ ಪ್ರಕಾರ ಹೆಚ್ಚುವರಿ ನಿರ್ಬಂಧ ಹೇರುವ ಕಾನೂನನ್ನು ಸರ್ಕಾರ ಮಾಡಬಹುದೇ ಹೊರತು ನ್ಯಾಯಾಲಯವಲ್ಲ ಎಂದು ಹೇಳಿದ್ದಾರೆ.