ಸಿ.ಟಿ. ರವಿ ಕಳ್ಳಬಟ್ಟಿ ಕುಡಿದು ಮಾತಾಡುತ್ತಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್; ನಾನು ಕೊತ್ವಾಲ್ ಶಿಷ್ಯ ಅಲ್ಲ ಎಂದ ರವಿ
ಬೆಳಗಾವಿ: ಮಾಜಿ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಕ್ರಮ ಆಸ್ತಿ ಗಳಿಕೆ ಕುರಿತ ಮಾತು ಇದೀಗ ವಿಧಾನ ಪರಿಷತ್ ಪ್ರತಿಪಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಸಿ.ಟಿ. ರವಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಸುವರ್ಣ ಸೌಧದಲ್ಲಿ ಮಾತನಡಿ ಬಿ.ಕೆ. ಹರಿಪ್ರಸಾದ್ ವಿರುದ್ಧ ಹರಿಹಾಯ್ದ ಸಿ.ಟಿ. ರವಿ, ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ, ಗ್ಯಾಂಗ್ ಲೀಡರ್ ಅಲ್ಲ. ನಾನು ಸ್ಟೂಡೆಂಟ್ ಯೂನಿಯನ್ ಲೀಡರ್ ಆಗಿ ಬೆಳೆದು ಬಂದವನು. ನಾನು ಯಾವುದೇ ಗೂಂಡಾ ಶಿಷ್ಯನಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ ಸ್ಪಷ್ಟವಾಗಿದೆ. ಅವರ ಟ್ರ್ಯಾಕ್ ರೆಕಾರ್ಡ್ ಬಿ.ಕೆ. ಹರಿಪ್ರಸಾದ್ ಅವರಿಗೆ ಗೊತ್ತಿರಲಿ. ನಾನು ಕುಡುಕ ಆದರೆ, ಗಾಂಜಾ ಸೇವನೆ ಮಾಡಿದ್ದರೆ ನನ್ನ ರಕ್ತ ಪರೀಕ್ಷೆ ಮಾಡಲಿ. ನಾನು ಕುಡಿದಿದ್ದೇನೆ ಎಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ.
ನಾನು ಇಲ್ಲಿಂದ ಬೆಳಗಾವಿಯವರೆಗೂ ಓಡಬಲ್ಲೆ, ಕೆಲವರಿಗೆ ನಡೆಯೋದಕ್ಕೂ ಸಾಧ್ಯವಿಲ್ಲ. ಕೇವಲ ತೂರಾಡುತ್ತಾರೆ. ನನ್ನನ್ನು ವೈಚಾರಿಕವಾಗಿ ಎದುರಿಸುವುದಕ್ಕೆ ಸಾಧ್ಯವಾಗದೇ ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ನಾನೂ ನಮ್ಮ ನಾಯಕರ ರೀತಿಯಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ.
ನನ್ನ ಆಸ್ತಿ ಎಷ್ಟಿದೆ ಎಂದು ಪ್ರತಿ ವರ್ಷ ಲೋಕಾಯುಕ್ತಕ್ಕೆ ಮಾಹಿತಿ ನೀಡುತ್ತಿದ್ದೇನೆ. ಯಾರಿಗಾದರೂ ಅಪನಂಬಿಕೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು. ನಾನು ಮಧ್ಯಮವರ್ಗದ ರೈತನ ಮಗ. ನನ್ನ ಆಸ್ತಿ 800 ಪಟ್ಟು ಹೆಚ್ಚಾಗಿಲ್ಲ. ನಮ್ಮ ಅಪ್ಪ ಮುಖ್ಯಮಂತ್ರಿಯಾಗಿರಲಿಲ್ಲ. ತಮ್ಮ ಮಗನಿಗೆ ಆಸ್ಪತ್ರೆ ಕಾಂಟ್ರಾಕ್ಟ್ ನೀಡಿಲ್ಲ. ನಮ್ಮ ಅಪ್ಪ ನನಗೆ ಸಂಸ್ಕಾರ ನೀಡಿದ್ದಾರೆ. ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರುತ್ತೆ ಅಂತ ಕೂಡ ನಾನು ಹೇಳಿಲ್ಲ ಎಂದರು.
ಸಿ.ಟಿ. ರವಿ ಮಾತಿಗೆ ಪ್ರತ್ಯುತ್ತರ ನೀಡಿದ ಹರಿಪ್ರಸಾದ್, ಸಿಟಿ ರವಿಯವರು, ಹೆಂಡ ಮಾರುವವರು ಕೊಲೆಗಟುಕರು ಎಂದಿದ್ದಾರೆ. ಇವರ ಬಿಎಸ್‌ವೈ ಇದ್ದಾಗ ಸಾರಾಯಿ ಬಂದ್ ಮಾಡಿಸಿದರು. ಸಾವಿರಾರು ಜನ ರಸ್ತೆ ಪಾಲಾದರು. ಇವಾಗ ಹೆಂಡದ ಮೇಲೆ ಕಣ್ಣಿದೆ. 24 ಸಾವಿರ ಕೋಟಿ ರೂ. ತೆರಿಗೆ ಹೆಂಡದ ಮೂಲಕ ಬರುತ್ತದೆ. ಇವರನ್ನು ಕೊಲೆಗಡು ಎಂದರೆ, ಗುಜರಾತ್ ಮಾದರಿಯಲ್ಲಿ ಪಾನ ನಿಷೇಧ ಮಾಡಿ. ಆ ಕಸುಬು ನಡೆಸುತ್ತಿರುವವರನ್ನು ಕೊಲೆಗಡುಕರು ಎಂದು ಹೇಳುವುದು ಸರಿಯಲ್ಲ ಎಂದರು.