ಸಾತನೂರಿನಲ್ಲಿ ವ್ಯಕ್ತಿ ನಿಗೂಢ ಸಾವಿನ ಪ್ರಕರಣ: ಸಿಎಂ ಬೊಮ್ಮಾಯಿ, ಗೃಹ ಸಚಿವರೇ ನೇರಹೊಣೆ - ಡಿ.ಕೆ ಶಿವಕುಮಾರ್
ಬೆಂಗಳೂರು: ಸಾತನೂರಿನಲ್ಲಿ ವ್ಯಕ್ತಿಯ ನೈತಿಕ ಪೊಲೀಸ್ ಗಿರಿ ಹತ್ಯೆಗೆ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರೇ ಹೊಣೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನನ್ನ ಕ್ಷೇತ್ರದ ಸಾತನೂರಿನಲ್ಲಿ ನೈತಿಕ ಪೊಲೀಸ್ ಗಿರಿಯ ಭಾಗವಾಗಿ ಒಬ್ಬನ ಕೊಲೆಯಾಗಿದೆ.
ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರಿಗೆ ಆಪ್ತನಾಗಿದ್ದು, ಈ ನೈತಿಕ ಪೊಲೀಸ್ ಗಿರಿಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಹೊಣೆ ಮಾಡುತ್ತೇನೆ. ಕಾರಣ ಅವರು ಈ ಹಿಂದೆ ನೈತಿಕ ಪೊಲೀಸ್ ಗಿರಿಗೆ ಅವರು ಬೆಂಬಲ ನೀಡಿದ್ದರು. ರೈತ ಜಾನುವಾರುಗಳನ್ನು ಸಂತೆಯಲ್ಲಿ ಖರೀದಿಸಿದ ರಸೀದಿ ಇದ್ದರೂ ಅವನಿಗೆ 2 ಲಕ್ಷ ಹಣದ ಬೇಡಿಕೆ ಇಟ್ಟು, ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಕೊಲೆಗೆ ಸರ್ಕಾರವೇ ಕಾರಣ. ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ. ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಅವರನ್ನು ಬಂಧಿಸದೇ ಅವರನ್ನು ರಕ್ಷಣೆ ಮಾಡಿದರೆ, ಇದಕ್ಕೆ ಅಧಿಕಾರಿಗಳು ಜವಾಬ್ದಾರಿಯಾಗಲಿದ್ದಾರೆ. ಹತ್ಯೆ ಮಾಡಿರುವವರು ನಿಮ್ಮ ಕಾರ್ಯಕರ್ತನೋ, ಆತ್ಮೀಯನೋ ಅವನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು