ಸಾಕುನಾಯಿಗಳನ್ನು ಹೆಸರಿಟ್ಟು ಕರೆಯದೇ ʻನಾಯಿʼ ಎಂದಿದ್ಕೆ ವೃದ್ಧನನ್ನೇ ಕೊಂದ ದಂಪತಿ
ತಮಿಳುನಾಡು: ಸಾಕುನಾಯಿಗಳ ವಿಚಾರವಾಗಿ ಸಂಬಂಧಿಕರ ನಡುವಿನ ಜಗಳ ಒಬ್ಬನ ಪ್ರಾಣವನ್ನು ಬಲಿತೆಗೆದುಕೊಂಡಿದೆ. ನಾಯಿಗಳನ್ನು ಅವುಗಳ ಹೆಸರಿನ ಬದಲು 'ನಾಯಿ' ಎಂದು ಕರೆದಿದ್ಕೆ ವೃದ್ಧನೊಬ್ಬನನ್ನು ಥಳಿಸಿದ ಪರಿಣಾಮ ಆತ ಅಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ದಿಂಡಿಗಲ್ ಜಿಲ್ಲೆಯ ತಾಡಿಕೊಂಬು ಎಂಬಲ್ಲಿ 65 ವರ್ಷದ ರಾಯಪ್ಪನ್ ವಾಸವಾಗಿದ್ದಾರೆ. ಡೇನಿಯಲ್ ಮತ್ತು ವಿನ್ಸೆಂಟ್ ಪಕ್ಕದಲ್ಲಿಯೇ ಇದ್ದಾರೆ. ಅವರುಗಳು ಪರಸ್ಪರ ಸಂಬಂಧಿಕರು. ಆದರೆ, ಡೇನಿಯಲ್ ಮತ್ತು ವಿನ್ಸೆಂಟ್ ಸಾಕುತ್ತಿರುವ ನಾಯಿಗಳ ವಿಚಾರವಾಗಿ ರಾಯಪ್ಪನಿಗೆ ಆಗಾಗ ಜಗಳಗಳು ನಡೆಯುತ್ತಲೇ ಇತ್ತು. ಅವರ ಮನೆಯ ಮುಂದೆ ಹೋಗುವವರ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ ಎಂದು ರಾಯಪ್ಪನವರು ಹಲವು ಬಾರಿ ದೂರಿದ್ದರು.
ಆದರೆ, ಡೇನಿಯಲ್ ಮತ್ತು ವಿನ್ಸೆಂಟ್ ಅವರು ನಾಯಿಗಳು, ಅವುಗಳಿಗೆ ಹೆಸರುಗಳಿವೆ ಮತ್ತು ಅವುಗಳನ್ನು ಆ ಹೆಸರಿನಿಂದ ಕರೆಯಬೇಕು ಎಂದು ಅನೇಕ ಬಾರಿ ಹೇಳಿದ್ದರು. ಆದರೆ, ರಾಯಪ್ಪ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ನಾಯಿಗಳನ್ನು ಕಟ್ಟಿ ಹಾಕಿ ಎಂದು ಹೇಳುತ್ತಲೇ ಇದ್ದರು. ಇದರಿಂದ ಕಳೆದ ಗುರುವಾರ ಜಗಳ ತಾರಕಕ್ಕೇರಿತ್ತು. ಈ ವೇಳೆ ರಾಯಪ್ಪ ನಾಯಿಗಳನ್ನು ಹೊಡೆಯಲು ಕೋಲು ತಂದಿದ್ದರು. ಇದರಿಂದ ಕುಪಿತಗೊಂಡ ವಿನ್ಸೆಂಟ್ ಮತ್ತು ಡೇನಿಯಲ್ ರಾಯಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ.
ಹೊಡೆತಗಳನ್ನು ತಾಳಲಾರದೆ ರಾಯಪ್ಪ ಪ್ರಜ್ಞೆ ತಪ್ಪಿ ಬಿದ್ದು, ಅಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ತಾಡಿಕೊಂಬು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.