ಸರ್ಕಾರಿ ನೌಕರರ ಮುಷ್ಕರಕ್ಕೆ ಬೆಂಬಲ: ಬಿಎಸ್‌ಪಿ
ಚಾಮರಾಜನಗರ: ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಬೆಂಬಲ ಘೋಷಿಸಿದೆ.
ನೌಕರರ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಬಿಎಸ್‌ಪಿಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ ಆಗ್ರಹಿಸಿದ್ದಾರೆ.
ಬಜೆಟ್‌ಗೂ ಮೊದಲು ಸರ್ಕಾರಿ ನೌಕರರ ಸಂಘದ ಜೊತೆ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಬಜೆಟ್ ಮಂಡಿಸುವಾಗ 7 ನೇ ವೇತನ ವರದಿ ಜಾರಿಗೆ ಸಂಬಂಧಿಸಿದಂತೆ ಕೇವಲ ₹6,000 ಕೋಟಿ ಕಾಯ್ದಿರಿಸಿರುವುದಾಗಿ ಘೋಷಿಸಿದ್ದರು.
ಆದರೆ ಬಜೆಟ್‌ನ ಪ್ರತಿಗಳಲ್ಲಿ ಈ ಘೋಷಣೆಗೆ ಸಂಬಂಧಿಸಿದ ಉಲ್ಲೇಖವಿಲ್ಲ. ಮುಖ್ಯಮಂತ್ರಿಯವರು ಸದನದಲ್ಲಿ ಸುಳ್ಳು ಹೇಳಿದ್ದಾರೆ' ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.
ಸರ್ಕಾರದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಕಾರ್ಯಭಾರವನ್ನು ಈಗಿರುವ ನೌಕರರೇ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಕಾರ್ಯ ಭಾರದಿಂದಾಗಿ ನೌಕರರು ಮಾನಸಿಕ ಮತ್ತು ದೈಹಿಕ ಒತ್ತಡ ಅನುಭವಿಸುತ್ತಿದ್ದಾರೆ. ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಈ ಹೊರೆಯನ್ನು ಇಳಿಸಬೇಕು ಹಾಗೂ ಯುವಜನತೆಗೆ ಉದ್ಯೋಗ ಕಲ್ಪಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಈಗಾಗಲೇ ಪಂಜಾಬ್ ರಾಜಸ್ಥಾನ ಛತ್ತೀಸಗಡದಂತಹ ರಾಜ್ಯಗಳು ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದ್ದು ರಾಜ್ಯದಲ್ಲೂ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು. ಎನ್‌ಎಚ್‌ಎಂ ನೌಕರರನ್ನು ಕಾಯಂ ಗೊಳಿಸಬೇಕು. ಕೆಎಸ್‌ಆರ್‌ಟಿಸಿಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬ ನೌಕರರ ಬೇಡಿಕೆಯನ್ನು ಈಡೇರಿಸುವುದು ಸೇರಿದಂತೆ ನೌಕರರ ಎಲ್ಲರ ಬೇಡಿಕೆಗಳನ್ನು ಜಾರಿಗೊಳಿಸಬೇಕು' ಎಂದು ನಾಗಯ್ಯ ಒತ್ತಾಯಿಸಿದ್ದಾರೆ.
ನೌಕರರ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೂಳಿಪಟವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ